

ಹೊಳೆಹೊನ್ನೂರು: ವಿದ್ಯಾರ್ಥಿಗಳು ಕ್ಷಣಿಕ ಆಕರ್ಷಣೆಗಳಿಗೆ ಬಲಿಯಾಗದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಬೆಂಗಳೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪ್ರಶಾಂತ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ರೇಂಜರ್ಸ್, ರೋವರ್ಸ್, ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಪ್ರತಿಭೆಯಲ್ಲಿ ಹಿಂದೆ ಉಳಿದಿಲ್ಲ. ನಿರಂತರ ಓದು ಹಾಗೂ ನಿಶ್ಚಿತ ಗುರಿಯೊಂದಿಗೆ ಮುಂದುವರಿಯಬೇಕು. ನಾವು ವಿದ್ಯಾರ್ಥಿ ದಿಸೆಯಿಂದಲೇ ಹೆಚ್ಚು ಶ್ರಮವಹಿಸಿದಾಗ ಉನ್ನತ ಸ್ಥಾನಕ್ಕೇರಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ವಿಷಯದಲ್ಲಿ ಗಮನ ಹರಿಸಬೇಕು. ಸರ್ಕಾರಗಳು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಆನವೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಸಿ.ನಾಗರಾಜ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಆಕಾಂಕ್ಷೆ, ದೃಷ್ಟಿಕೋನ ಮತ್ತು ಕ್ರಿಯೆ ತುಂಬ ಮುಖ್ಯ. ನಿರಂತರ ಪ್ರಯತ್ನದಿಂದ ಯಶಸ್ಸು ಖಚಿತ. ಕಾಲೇಜಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟರೆ ಉತ್ತಮ ಫಲಿತಾಂಶ ನಮಗೆ ದೊರೆಯಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ಆರ್.ಪ್ರತಿಭಾ ಮಾತನಾಡಿ, ಇತ್ತೀಚೆಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳೂ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಉತ್ತಮ ಜೀವನ ರೂಪಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ನಮ್ಮ ಆದರ್ಶ ಜೀವನ ಇತರರಿಗೆ ಮಾದರಿಯಾಗಿ ಇರಬೇಕು ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ರಾಜುನಾಯ್ಕ, ರೇಂಜರ್ಸ್ ಘಟಕದ ಸಂಚಾಲಕ ಶಂಕರ, ಐಕ್ಯುಎಸಿ ಸಂಚಾಲಕಿ ಡಾ. ಭಾರತಿ ದೇವಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಡಾ. ಛಾಯಶ್ರೀ, ಸಿಡಿಸಿ ಸದಸ್ಯರಾದ ಅಂಜನಪ್ಪ, ಮಮತಾ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.