

ಹನಗೋಡು: ವಿದ್ಯೆ ಕಲಿಸಿದ ಗುರು, ಜನ್ಮ ನೀಡಿದ ತಂದೆ-ತಾಯಿಯನ್ನು ಎಂದಿಗೂ ಮರೆಯಬಾರದು ಎಂದು ಕರಣಕುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ರವಿಕುಮಾರ್ ತಿಳಿಸಿದರು.
ಹನಗೋಡು ಹೋಬಳಿ ಕಡೆಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಮಾತನಾಡಿ, ಒಂದು ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುವುದು ಅಲ್ಲಿನ ಪಾಲಕರು ಮತ್ತು ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಎಂದು ಹೇಳಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವರ್ಗಾವಣೆಗೊಂಡ ಶಿಕ್ಷಕರಾದ ಮಂಜುನಾಥ್ ಮಿಟ್ಟಿ, ವೀರೇಶ್, ಆಶಾ, ಭಾಗ್ಯಾ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಗವಿಮಾದು, ಚಲುವರಾಜು, ರಮೇಶ್, ಸಿಆರ್‌ಪಿ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.