VIDEO| ವಾರದೊಳಗೆ 1 ಕೋಟಿಗೂ ಅಧಿಕ ವೀಕ್ಷಣೆ: ಹೈಸ್ಕೂಲ್​ ವಿದ್ಯಾರ್ಥಿನಿಯ ಅಚ್ಚರಿಯ ವಿಡಿಯೋ!

high School girl
Published on

ಜಕಾರ್ತ: ಯಾವುದಾದರೊಂದು ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಬೇಕೆಂದರೆ ಅದು ಬಹಳ ವಿಶೇಷವಾಗಿರಬೇಕು. ಇನ್ನು ಕೆಲವರು ತಮ್ಮ ವಿಡಿಯೋ ವೈರಲ್​ ಮಾಡಲು ಸಾಕಷ್ಟು ಸರ್ಕಸ್​ ಮಾಡಿರುತ್ತಾರೆ. ಹೀಗಿರುವಾಗ ವಿದ್ಯಾರ್ಥಿನಿಯೊಬ್ಬಳ ವೈರಲ್​ ವಿಡಿಯೋ ನೋಡಿದರೆ, ಅದರಲ್ಲಿ ಅಂಥದ್ದೇನಿದೆ ಎಂದು ಬಹುಶಃ ನಿಮಗೇ ಅಚ್ಚರಿಯಾಗಬಹುದು.

ಹೌದು, ಇಂಡೋನೇಷ್ಯಾದ ವಿದ್ಯಾರ್ಥಿನಿಯೊಬ್ಬಳು ಮಲಗುವ ಮುನ್ನ ಸೀನಿರುವ ವಿಡಿಯೋವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಹೆಚ್ಚು ವೀಕ್ಷಣೆ ಗಿಟ್ಟಿಸಲು ಅನೇಕ ಕಸರತ್ತು ಮಾಡುವವರ ಹೊಟ್ಟೆಗೆ ಮೆಣಸಿನಕಾಯಿ ಇಟ್ಟಂತಾಗಿದೆ.

ಈಸ್ಟ್​ ಜಾವಾ ಪ್ರಾಂತ್ಯದ ಬಾನ್ಯುವಾಂಗಿ ನಗರದ ನಿವಾಸಿ, ಹೈಸ್ಕೂಲ್​ ವಿದ್ಯಾರ್ಥಿನಿ ಜಿದ್ದಾನಾ ದಸ್ತುರಿಯಾ, ತನ್ನಷ್ಟಕ್ಕೆ ತಾನು ಸೀನುವ ವಿಡಿಯೋವನ್ನು ಟಿಕ್​ಟಾಕ್​ನಲ್ಲಿ ಆಕಸ್ಮಿಕವಾಗಿ ಪೋಸ್ಟ್​ ಮಾಡಿದ್ದರು. ಕೇವಲ ಒಂದೇ ವಾರದಲ್ಲಿ ಬರೋಬ್ಬರಿ 1 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡು ಎಲ್ಲರ ಹುಬ್ಬೇರಿಸಿದೆ.

ವಿದ್ಯಾರ್ಥಿನಿ ಮಲಗುವ ಮುನ್ನ ತನ್ನ ಫಾಲೋವರ್ಸ್​ಗೆ ಏನೋ ಹೇಳಲು ಮುಂದಾಗಿ ಆರಂಭದಲ್ಲೇ ಸೀನುತ್ತಾಳೆ. ಇದೇ ವಿಡಿಯೋ ಆಕಸ್ಮಿಕವಾಗಿ ತನ್ನ ಟಿಕ್​ಟಾಕ್​ ಖಾತೆಯಲ್ಲಿ ಪೋಸ್ಟ್​ ಆಗಿದೆ. ವಿಡಿಯೋವನ್ನು ಈಗಾಗಲೇ ಆಕೆಯ 762,000 ಹಿಂಬಾಲಕರು ಶೇರ್​ ಮಾಡಿದ್ದು, ಒಂದು ವಾರ ಪೂರೈಸುವ ಮುನ್ನವೇ 1 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ ವಿಡಿಯೋವನ್ನು ಡ್ರಾಫ್ಟ್​ನಲ್ಲಿ ಇಟ್ಟಿದ್ದೆ. ಆಕಸ್ಮಿಕವಾಗಿ ಅಪ್​ಲೋಡ್​ ಆಗಿದೆ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಯಾವುದೇ ಅಡಿಬರಹ, ಹ್ಯಾಷ್​ಟ್ಯಾಗ್​ ಇಲ್ಲದೇ ಇದ್ದಕ್ಕಿದ್ದಂತೆ ವಿಡಿಯೋ ಟಿಕ್​ಟಾಕ್​ನಲ್ಲಿ ಕಾಣಿಸಿಕೊಂಡಿದೆ. ಮರುದಿನ ಬೆಳಗ್ಗೆ ಗ್ರೂಪ್​ ಚಾಟ್​ ಮಾಡುವಾಗ ವಿಡಿಯೋ ಬಗ್ಗೆ ತಿಳಿಸಿದರು ಎಂದು ಸ್ಪಷ್ಟನೆ ನೀಡಿದ್ದಾಳೆ. ಅಲ್ಲದೆ, ವಿಡಿಯೋ ಇಷ್ಟು ವೈರಲ್​ ಆಗಿರುವುದು ಸ್ವತಃ ಆಕೆಗೂ ಅಚ್ಚರಿಯಾಗಿದೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net