

ಮಾಸ್ಕೋ: ಎಂತೆಂಥಾ ಖತರ್ನಾಕ್ ಖದೀಮರು ಇರುತ್ತಾರೆ ಎಂಬುದಕ್ಕೆ ರಷ್ಯಾದ ಸೂಪರ್ ಮಾರ್ಕೆಟ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವು ಸಾಕ್ಷಿಯಾಗಿದೆ. ಶಾಪ್ಗೆ ನುಗ್ಗಿದ ಮಹಿಳೆಯೊಬ್ಬಳು ಅಲ್ಲಿನ ದಿನಸಿಗಳನ್ನು ಕದ್ದು ತನ್ನ ಒಳ ಉಡುಪಿನ ಒಳಗೆ ಬಚ್ಚಿಟ್ಟುಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ದಕ್ಷಿಣ ರಷ್ಯಾದ ಕ್ರಾಸ್ನೊಡರ್ ನಗರದಲ್ಲಿರುವ ಸೂಪರ್ ಮಾರ್ಕೆಟ್ನಲ್ಲಿ ನಡೆದಿದ್ದು, ಶಾಪ್ ಒಳಗಡೆಯಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಕ್ಷಣಾ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸುವಾಗ ಈ ಘಟನೆ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ ಏನಿದೆ?: ವ್ಯಕ್ತಿಯೊಬ್ಬನ ಹಿಂದೆ ಶಾಪ್ಗೆ ಪ್ರವೇಶಿಸುವ ಮಹಿಳೆ ಫ್ರೀಜರ್ ಮೇಲಿನ ಕಪಾಟುಗಳಲ್ಲಿರುವ ವಸ್ತುಗಳಲ್ಲಿ ಒಂದೊಂದಾಗಿ ತನಗೆ ಬೇಕಾದುದ್ದನ್ನು ತೆಗೆದುಕೊಂಡು ತಾನುಟ್ಟ ಬಟ್ಟೆಯನ್ನು ಮೇಲೆತ್ತಿ ಒಳ ಉಡುಪಿನ ಒಳಗೆ ತರಾತುರಿಯಲ್ಲಿ ಇಟ್ಟುಕೊಳ್ಳುತ್ತಾಳೆ. ಒಟ್ಟು ಆರು ವಸ್ತುಗಳನ್ನು ಆಕೆ ಕದಿಯುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಘಟನೆ ಅಕ್ಟೋಬರ್ 5 ರಂದು ಸಂಜೆ 5.20 ಕ್ಕೆ ನಡೆದಿರುವುದಾಗಿ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ರಕ್ಷಣಾ ಸಿಬ್ಬಂದಿಗಳು ಜಾಲತಾಣಗಳಲ್ಲಿ ಹರಿಬಿಟ್ಟು ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಹೇಳಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಸಹ ತಮ್ಮದೇ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅವಳ ಒಳ ಉಡುಪು ಮ್ಯಾಜಿಕ್ ಬ್ಯಾಗ್ ರೀತಿ ಇದೆ. ಎಲ್ಲವನ್ನೂ ಅಡಗಿಸಿಡಬಹುದು ಎಂದು ನೆಟ್ಟಿಗರೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇದೀಗ ಮಹಿಳೆ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್) (ವಿಡಿಯೋ ಕೃಪೆ: ಡೈಲಿ ಮೇಲ್)