ಗುಳ್ಳಗಟ್ಟ ರಸ್ತೆಗೆ ದುರಸ್ತಿ ಮಾಡುವಂತೆ ಹೋರಾಟ

6 mlv1
Published on

ಮಳವಳ್ಳಿ: ತಾಲೂಕಿನ ಗುಳ್ಳಗಟ್ಟ ಗ್ರಾಮಸ್ಥರು ರಸ್ತೆಗೆ ದುರಸ್ತಿ ಮಾಡಿಸುವಂತೆ ಆಗ್ರಹಿಸಿ ಶುಕ್ರವಾರ ಗ್ರಾಮದಿಂದ ಪಟ್ಟಣದ ತಾಪಂವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು.

ಗ್ರಾಮದಿಂದ ಪಾದಯಾತ್ರೆ ಹೊರಟ ಗ್ರಾಮಸ್ಥರು ಹಾಗೂ ಪ್ರಾಂತ ರೈತ ಸಂಘ, ಜನವಾದಿ ಮಹಿಳಾ ಸಂಘಟನೆ ಹಾಗೂ ಪ್ರಾಂತ ಕೃಷಿ ಕೂಲಿಕಾರರ ಸಂಘ ಮುಂತಾದ ಸಂಘಟನೆಗಳ ಮುಖಂಡರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ಇಲ್ಲಿನ ತಾ ಪಂ ಕಚೇರಿ ಆವರಣಕ್ಕೆ ಆಗಮಿಸಿದ ಪ್ರತಿಭಟನಾಕಾರರು ಕಚೇರಿ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದರು. ಅದಕ್ಕೆ ಅವಕಾಶ ನೀಡದ ಪೊಲೀಸರು ಬ್ಯಾರಿಕೇಡ್ ಹಾಕಿ ಕಚೇರಿ ಪ್ರವೇಶದ್ವಾರಕ್ಕೆ ಬಾರದಂತೆ ತಡೆದ ಪರಿಣಾಮ ಕಚೇರಿ ಹೊರ ಆವರಣದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಪ್ರಾಂತ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಲಿಂಗರಾಜಮೂರ್ತಿ ಮಾತನಾಡಿ, ಕಳೆದ 10 ವರ್ಷಗಳಿಂದ ಹೆದ್ದಾರಿಯಿಂದ ಗುಳ್ಳಗಟ್ಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಕೆಸರಿನ ಗದ್ದೆಯಂತಾಗಿದೆ. ರಸ್ತೆಯುದ್ದಕ್ಕೂ ಬೀದಿ ದೀಪಗಳಿಲ್ಲದೆ ಗಾರ್ಮೆಂಟ್ಸ್ ಫ್ಯಾಕ್ಟರಿ ಸೇರಿದಂತೆ ಇತರ ಕೆಲಸಕ್ಕೆ ಹೋಗುವ ಮಹಿಳೆಯರು ಕತ್ತಲಿನಲ್ಲಿ ಆತಂಕದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಇದೇ ವಿಚಾರಕ್ಕೆ ಪ್ರತಿಭಟನೆ ನಡೆಸಿದ ವೇಳೆ 15 ದಿನಗಳ ಒಳಗೆ ಈ ರಸ್ತೆಗೆ ಬೀದಿ ದೀಪ ವ್ಯವಸ್ಥೆ, ಮೂರು ತಿಂಗಳ ಒಳಗೆ ರಸ್ತೆಗೆ ಡಾಂಬರೀಕರಣ ಮಾಡುವುದಾಗಿ ತಾಪಂ ಇಒ ಭರವಸೆ ನೀಡಿದ್ದರು. ಆದರೆ ಈ ಭರವಸೆಗಳು ಇಂದಿಗೂ ಈಡೇರಿಲ್ಲ ಎಂದು ಕಿಡಿಕಾರಿದರು.

ಕೂಡಲೇ ರಸ್ತೆ ಕಾಮಗಾರಿ ಆರಂಭಿಸುವುದರ ಜತೆಗೆ ವಿದ್ಯುತ್ ದೀಪ ಅಳವಡಿಸಬೇಕು. ಅಲ್ಲಿಯವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಪರಿಸ್ಥಿತಿ ಗಂಭೀರತೆ ಅರಿತ ನಂತರ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಎಇಇ ಮಹದೇವಸ್ವಾಮಿ ಈಗಾಗಲೇ ಮೂರೂವರೆ ಕಿಮೀ ರಸ್ತೆ ಕಾಮಗಾರಿಗೆ ಕ್ರಿಯಾಯೋಜನೆ ನೀಡಲಾಗಿದ್ದು, ಹಣ ಬಿಡುಗಡೆಯಾದ ಕೂಡಲೇ ಕ್ರಮ ವಹಿಸುವುದಾಗಿ ತಿಳಿಸಿದರು. ಸೆಸ್ಕ್ ಎಇಇ ಪ್ರೇಮ್‌ಕುಮಾರ್ ಮಾತನಾಡಿ, ಗ್ರಾ ಪಂ ವತಿಯಿಂದ ಹಣ ಜಮಾ ಮಾಡಿದ ಕೂಡಲೇ ಬೀದಿ ದೀಪ ಅಳವಡಿಸುವ ಭರವಸೆ ನೀಡಿದ ನಂತರ ಹೋರಾಟ ಕೈ ಬಿಡಲಾಯಿತು.

ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರ ಭರತ್ ರಾಜ್, ಗುರುಸ್ವಾಮಿ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲಯ್ಯ, ಜಯಶೀಲ, ಗ್ರಾಮದ ಮುಖಂಡರಾದ ಪ್ರಕಾಶ್, ಹೇಮಂತ್. ಸತೀಶ್, ರತ್ನಮ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net