ರಾಜ್ಯ ಸ್ಥಾನಮಾನಕ್ಕೆ ಕಸರತ್ತು; ಕೇಂದ್ರದ ಮೇಲೆ ಓಮರ್​ ಅಬ್ದುಲ್ಲಾ ಒತ್ತಡ

Omar Abdullah
Published on

ರಾಘವ ಶರ್ಮ ನಿಡ್ಲೆ, ನವದೆಹಲಿ

ಜಮ್ಮು-ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ್ದ ನ್ಯಾಷನಲ್ ಕಾನ್ಪರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಸರ್ಕಾರ ರಚನೆ ಬಳಿಕ ನಡೆಸಿದ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ರಾಜ್ಯ ಸ್ಥಾನಮಾನಕ್ಕೆ ಸಂಬಂಧಿಸಿದ ನಿರ್ಣಯಕ್ಕೆ ಅನುಮೋದನೆ ಪಡೆದುಕೊಂಡಿದ್ದರು. ಈಗ ಇದರ ಮುಂದುವರಿದ ಭಾಗವಾಗಿ ಗುರುವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದು, ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ನಮ್ಮ ಬೇಡಿಕೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರಕ್ಕೆ 2018ರ ಪೂರ್ವದಲ್ಲಿದ್ದಂತೆ ರಾಜ್ಯ ಸ್ಥಾನಮಾನ ಮರುಕಳಿಸುವಂತೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುತ್ತದೋ ಇಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ಸ್ಥಾನಮಾನ ಮರುಸ್ಥಾಪಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಬಹುದು ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಚುನಾವಣೆ ಘೊಷಣೆಗೆ ಮುನ್ನ ಲೆಫ್ಟಿನಂಟ್ ಗವರ್ನರ್ ಆಡಳಿತ ಹೆಚ್ಚಿರುವ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ಸ್ಪರ್ಧಿಸಲು ಮನಸ್ಸಿಲ್ಲ ಎಂದಿದ್ದ ಒಮರ್ ಅಬ್ದುಲ್ಲಾ, ನಂತರದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಈಗ ಅಧಿಕಾರದಲ್ಲಿದ್ದರೂ, ಲೆಫ್ಟಿನಂಟ್ ಗವರ್ನರ್​ಗೂ ಹೆಚ್ಚಿನ ಅಧಿಕಾರಗಳಿರುವುದರಿಂದ ಬಹುತೇಕ ವಿಷಯಗಳಲ್ಲಿ ಲೆ. ಗವರ್ನರ್ ಮನೋಜ್ ಸಿನ್ಹಾ ಒಪ್ಪಿಗೆಯನ್ನೂ ಸರ್ಕಾರ ಪಡೆದುಕೊಳ್ಳುವುದು ಅನಿವಾರ್ಯ. ಆದರೆ, ಸ್ಥಳೀಯ ಸರ್ಕಾರ ಲೆ. ಗವರ್ನರ್ ಹಸ್ತಕ್ಷೇಪ ಬಯಸದ ಕಾರಣ ಮತ್ತು ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಲೆ. ಗವರ್ನರ್ ನಡುವೆ ಸಂಘರ್ಷ ಉಂಟಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸ್ಥಾನಮಾನವನ್ನು ಬಯಸುತ್ತಿದೆ. ದೆಹಲಿಯಲ್ಲಿ ಸುಮಾರು 1 ಗಂಟೆಗಳ ಕಾಲ ಒಮರ್ ಅಬ್ದುಲ್ಲಾ-ಅಮಿತ್ ಶಾ ನಡುವೆ ಮಾತುಕತೆ ನಡೆದಿದ್ದು, ಕುತೂಹಲ ಹೆಚ್ಚಿದೆ.

ಕೇಂದ್ರದ ನಡೆ ಕುತೂಹಲ: ಜೆ-ಕೆ ವಿಧಾನಸಭೆ ಪ್ರತಿ ವಿಷಯಕ್ಕೂ ಕಾನೂನನ್ನು ರಚಿಸಬಹುದು ಮತ್ತು ಕಾನೂನಿನ ಜಾರಿಗೆ ಹೊಸದಾಗಿ ಬರುವ ರಾಜ್ಯಪಾಲರ ಸಹಿ ಮಾತ್ರ ಅಗತ್ಯವಿರುತ್ತದೆ. ಹಾಗೇ, ಪ್ರಸ್ತುತ ಜೆ-ಕೆಯಲ್ಲಿ ಒಟ್ಟು ಶಾಸಕರ ಸಂಖ್ಯೆಯಲ್ಲಿ ಶೇ.10ರಷ್ಟು ಮಂದಿಯನ್ನು ಮಾತ್ರ ಸಚಿವರನ್ನಾಗಿ ಮಾಡಬಹುದು. ರಾಜ್ಯ ಸ್ಥಾನಮಾನ ಬಂದರೆ ಶೇ. 15ರಷ್ಟು ಶಾಸಕರು ಮಂತ್ರಿಗಳಾಗಬಹುದು. ಜೆ-ಕೆಯ 370ನೇ ವಿಧಿ ರದ್ದತಿ ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್, ಮುಂದಿನ ದಿನಗಳಲ್ಲಿ ರಾಜ್ಯ ಸ್ಥಾನಮಾನ ನೀಡಬೇಕು ಎಂದೂ ಆದೇಶಿಸಿತ್ತು. ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ, ಕೇಂದ್ರ ಈ ದಿಕ್ಕಿನಲ್ಲಿ ಕೆಲಸ ಮಾಡಲಿದೆ ಎಂದಿದ್ದರು. ಆದರೆ, ಜೆ-ಕೆಯ ಆಮೂಲಾಗ್ರ ಬದಲಾವಣೆಗೆ ಕಾರಣವಾಗಿರುವ ಎನ್​ಡಿಎ ಸರ್ಕಾರ, ರಾಜ್ಯ ಸ್ಥಾನಮಾನ ಮರುಸ್ಥಾಪಿಸಿ ಸಂಪೂರ್ಣ ಅಧಿಕಾರವನ್ನು ನ್ಯಾಷನಲ್ ಕಾನ್ಪರೆನ್ಸ್-ಕಾಂಗ್ರೆಸ್​ಗೆ ಬಿಟ್ಟುಕೊಡುವುದೇ ಎಂಬ ಅನುಮಾನವೂ ಇದೆ. ಇದು ಅತಿಸೂಕ್ಷ್ಮ ಕಣಿವೆ ಪ್ರದೇಶವಾಗಿರುವುದರಿಂದ ಕೇಂದ್ರ ತನ್ನ ನಿಯಂತ್ರಣವನ್ನು ಪೂರ್ಣವಾಗಿ ಚುನಾಯಿತ ಸರ್ಕಾರಕ್ಕೆ ನೀಡುವುದೇ ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಇಲ್ಲವಾದಲ್ಲಿ, ರಾಜಧಾನಿ ದಿಲ್ಲಿಯಂತೆ ಕೇಂದ್ರ-ಲೆ. ಗವರ್ನರ್ ನಡುವಿನ ಸಂಘರ್ಷ ಜಮ್ಮು-ಕಾಶ್ಮೀರದಲ್ಲೂ ನಿತ್ಯ ನಿರಂತರವಾಗಿ ನಡೆದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಲೆಫ್ಟಿನೆಂಟ್ ಗವರ್ನರ್ ಬಳಿ ಅಧಿಕಾರ: 2019ರಲ್ಲಿ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಅಲ್ಲಿನ ಆಡಳಿತದಲ್ಲಿ ಲೆ.ಗವರ್ನರ್ ದೊಡ್ಡ ಪಾತ್ರವಹಿಸುತ್ತಾ ಬಂದಿದ್ದಾರೆ. ಈಗ ಚುನಾಯಿತ ಸರ್ಕಾರವಿದ್ದರೂ ಲೆ.ಗವರ್ನರ್ ಪಾತ್ರ ಕಡಿಮೆಯಾಗಿಲ್ಲ. 2019ರ ಜೆ-ಕೆ ಪುನರ್ ಸಂಘಟನೆ ಕಾಯ್ದೆ ಪ್ರಕಾರ ಪೊಲೀಸ್, ಕಾನೂನು ಮತ್ತು ಸುವ್ಯವಸ್ಥೆ ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ಸರ್ಕಾರ ಕಾನೂನುಗಳನ್ನು ಮಾಡಬಹುದಾಗಿದ್ದರೂ, ಅದು ಕೇಂದ್ರದ ಕಾನೂನಿಗೆ ಧಕ್ಕೆಯಾಗದಂತೆ ರೂಪಿಸಬೇಕಾಗುತ್ತದೆ. ಇದಲ್ಲದೆ, ಲೆ. ಗವರ್ನರ್ ಅನುಮೋದಿಸದ ಹೊರತು ಸರ್ಕಾರ ಯಾವುದೇ ಮಸೂದೆ ಅಥವಾ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯವಿಲ್ಲ ಎಂಬ ನಿಬಂಧನೆಯೂ ಕಾಯ್ದೆಯಲ್ಲಿದೆ. ಆದರೆ, ಜೆ-ಕೆಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಪ್ರಾಪ್ತಿಯಾದರೆ ಎಲ್ಲಾ ಅಧಿಕಾರಗಳೂ ಸರ್ಕಾರದ ವ್ಯಾಪ್ತಿಗೆ ಬರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net