ಸಂಪಾದಕೀಯ| ಸಮಾಜಘಾತಕ ಎನ್​ಜಿಒಗಳ ವಿರುದ್ಧ ಕಠಿಣ ಕ್ರಮ ಅವಶ್ಯ

Editorial
Published on

ಸಮಾಜದ ಕೊರತೆಗಳನ್ನು ನಿವಾರಿಸಿ, ಶಕ್ತಿಯನ್ನು ವರ್ಧಿಸಲು ಸರ್ಕಾರೇತರ ಸಂಸ್ಥೆಗಳು (ಎನ್​ಜಿಒ) ಬೇಕು ಎಂಬುದೇನೋ ಸರಿಯೇ. ಅಲ್ಲದೆ, ಇಂಥ ಸಾಕಷ್ಟು ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತ ಬದಲಾವಣೆಯ ಪಥದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವುದು ಸುಳ್ಳಲ್ಲ. ಆದರೆ, ಕೆಲ ಎನ್​ಜಿಒಗಳು ‘ಸಮಾಜಸೇವೆ’ಯ ಸೋಗು ಹಾಕಿಕೊಂಡು ರಾಷ್ಟ್ರಘಾತಕ ಕೆಲಸಗಳಿಗೆ ಕೈಜೋಡಿಸುತ್ತಿರುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಇಂಥ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಮತ್ತು ಕಠಿಣ ಕ್ರಮ ಕೈಗೊಂಡಾಗ ಮಾತ್ರ ಸಮಾಜದಲ್ಲಿ ಅಪಾಯಕಾರಿ ಬೇರುಗಳನ್ನು ವಿಸ್ತರಿಸುತ್ತಿರುವ ಶಕ್ತಿಗಳನ್ನು ನಿಯಂತ್ರಿಸಲು ಸಾಧ್ಯ ಎಂಬುದನ್ನು ಮರೆಯುವಂತಿಲ್ಲ.

ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ ಕಾಶ್ಮೀರ, ಬೆಂಗಳೂರು ಸೇರಿ ದೇಶದ 12 ಕಡೆ ಎನ್​ಜಿಒಗಳು ಮತ್ತು ಇತರ ಸಂಘಟನೆಗಳ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಎನ್​ಜಿಒ ಹೆಸರಲ್ಲಿ ಉಗ್ರ ಸಂಘಟನೆಗಾಗಿ ಹಣ ಸಂಗ್ರಹಿಸಿದ ಆರೋಪಕ್ಕೀಡಾಗಿರುವ ಜಮ್ಮು-ಕಾಶ್ಮೀರ ಕೊಲಿಯೇಷನ್ ಆಫ್ ಸಿವಿಲ್ ಸೊಸೈಟಿ (ಜೆಕೆಸಿಸಿಎಸ್) ಜತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಬೆಂಗಳೂರಿನ ಮಹಿಳೆಯೊಬ್ಬರ ಮನೆ ಮೇಲೆ ದಾಳಿ ನಡೆಸಿ, ಎನ್​ಐಎ ಮಾಹಿತಿಗಳನ್ನು ಶೋಧಿಸಿದೆ.

ಜೆಕೆಸಿಸಿಎಸ್ ಎನ್​ಜಿಒ ಹೆಸರಲ್ಲಿ ದೇಶ-ವಿದೇಶಗಳಿಂದ ಹಣ ಸಂಗ್ರಹಿಸಿದ್ದು, ಈ ಹಣವನ್ನು ಉಗ್ರ ಸಂಘಟನೆಗಳಿಗೆ ಒದಗಿಸಿದ ಗಂಭೀರ ಆರೋಪವಿದೆ. ಎನ್​ಜಿಒ ಗಳ ಬಗ್ಗೆ ಈ ಥರದ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಎನ್​ಜಿಒಗಳ ವಿರುದ್ಧ ತನಿಖೆ ನಡೆಸಲಾಗಿದೆ. ಈ ದೇಶದಲ್ಲೇ ನೆಲೆಸಿ, ಇಲ್ಲಿನ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡು, ದೇಶಕ್ಕೆ ವಿರುದ್ಧವಾದ ಚಟುವಟಿಕೆಗಳನ್ನು ನಡೆಸುವುದು ಅಕ್ಷಮ್ಯ. ಎನ್​ಜಿಒಗಳ ಕಾರ್ಯನಿರ್ವಹಣೆ ಪಾರದರ್ಶಕ, ಸಮಾಜಮುಖಿ ಆಗಿರಬೇಕೆ ಹೊರತು ರಾಷ್ಟ್ರವಿರೋಧಿ ತತ್ತ್ವಗಳನ್ನು ಬೆಂಬಲಿಸಬಾರದು. ವಿದೇಶದಿಂದ ದೇಣಿಗೆ ಪಡೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಎನ್​ಜಿಒಗಳಿಗೆ ಈ ಹಿಂದೆ ನೋಟಿಸ್ ನೀಡಿದ್ದ ಕೇಂದ್ರ ಸರ್ಕಾರ ಇಂಥ ಸಾವಿರಾರು ಸಂಸ್ಥೆಗಳ ಅನುಮತಿಯನ್ನೇ ರದ್ದುಗೊಳಿಸಿತು ಮತ್ತು ಉಳಿದ ಎನ್​ಜಿಒಗಳ ಮೇಲೆ ಕಣ್ಗಾವಲು ಇರಿಸುವ ವ್ಯವಸ್ಥೆ ಜಾರಿಗೊಳಿಸಿದೆ ಎಂಬುದು ಇಲ್ಲಿ ಗಮನಾರ್ಹ. ಕರ್ನಾಟಕದಲ್ಲೂ ಎನ್​ಜಿಒಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ 2018ರಲ್ಲೇ ಪ್ರತ್ಯೇಕ ಮಾರ್ಗಸೂಚಿಯನ್ನೂ ಹೊರಡಿಸಿತ್ತು. ಸ್ವಯಂಸೇವಾ ಸಂಸ್ಥೆಗಳು ಸೇವೆಯ ಶ್ರೇಷ್ಠ ಮಾಧ್ಯಮಗಳಾಗಿ, ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ನೀಡಬೇಕು. ಆದರೆ, ಹಣಕಾಸಿನ ಗೋಲ್​ಮಾಲ್, ರಾಷ್ಟ್ರವಿರೋಧಿ ನೀತಿ ಅನುಸರಿಸಿದರೆ ಅಂಥ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net