ಬೀದಿಗೆ ಬಿದ್ದ ರಸ್ತೆ ವ್ಯಾಪಾರಿಗಳು: ಎರಡು ಲಾಕ್​ಡೌನ್ ಬಳಿಕ ಮಳೆ ಆಘಾತ, ಬದುಕು ಮೂರಾಬಟ್ಟೆ..

Front Lead
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕರೊನಾದಿಂದಾಗಿ ಎರಡೆರಡು ಬಾರಿ ಜಾರಿಯಾಗಿದ್ದ ಲಾಕ್​ಡೌನ್ ಹಾಗೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳು, ಮಾಡಿದ ಸಾಲಕ್ಕೆ ಬಡ್ಡಿ ಪಾವತಿಸಲಾಗದೆ, ಜೀವನ ನಿರ್ವಹಣೆಗೂ ಪರದಾಡಬೇಕಾದ ದುಸ್ಥಿತಿಗೆ ತಲುಪಿದ್ದಾರೆ. ಸರ್ಕಾರ ನೆರವಿಗೆ ಬರಬಹುದೆಂಬ ಒಂದೇ ಒಂದು ನಿರೀಕ್ಷೆಯಲ್ಲಿ ಜೀವನ ದೂಡುತ್ತಿದ್ದಾರೆ. ತರಕಾರಿ, ಹಣ್ಣು, ಹೂವಿನ ವ್ಯಾಪಾರ ಹೊರತುಪಡಿಸಿ ಉಳಿದ ಯಾವುದೇ ವ್ಯಾಪಾರ ನಡೆಯುತ್ತಿಲ್ಲ. ಜನ ಬೀದಿಗೆ ಬರುವುದಕ್ಕೆ, ಬಂದರೂ ಮೊದಲಿನ ರೀತಿಯಲ್ಲಿ ಬೀದಿ ವ್ಯಾಪಾರಿ ಗಳಿಂದ ಖರೀದಿ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಜನರಿಂದ ನಗದು ಹರಿದಾಟ ಕಡಿಮೆಯಾಗಿರು ವುದೂ ಸಹ ಬೀದಿ ವ್ಯಾಪಾರಿಗಳ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

ಎಷ್ಟು ವಹಿವಾಟು?: ಇಡೀ ರಾಜ್ಯದಲ್ಲಿ ಕೋವಿಡ್​ಗಿಂತ ಮುನ್ನ ಬೀದಿ ವ್ಯಾಪಾರದಲ್ಲೇ ನಿತ್ಯ ಸುಮಾರು 10 ಕೋಟಿ ರೂ. ತನಕ ವಹಿವಾಟು ನಡೆಯುತ್ತಿತ್ತು. ಕನಿಷ್ಠ 2 ಸಾವಿರ ರೂ.ಗಳಿಂದ ಗರಿಷ್ಠ 10 ಸಾವಿರ ರೂ.ಗಳ ತನಕ ವಹಿವಾಟು ನಡೆಸುವವರೂ ಇದ್ದರು. ಇದರಿಂದ ಬರುವ ಲಾಭದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಸದ್ಯ ಇದರಲ್ಲಿ ಈಗ ಶೇ. 50 ವಹಿವಾಟೂ ನಡೆಯುತ್ತಿಲ್ಲ ಎಂದು ವ್ಯಾಪಾರಿಗಳು ಗೋಳಾಡುತ್ತಾರೆ. ಗಾಡಿ ತಳ್ಳಿಕೊಂಡು ವ್ಯಾಪಾರ ಮಾಡುವವರ ಪೈಕಿ ಸಾಕಷ್ಟು ಜನರು ಮಳೆಯಲ್ಲಿ ನೆನೆದು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅದೇ ರೀತಿಯಲ್ಲಿ ಆನ್​ಲೈನ್ ವಹಿವಾಟು ಹೆಚ್ಚಿರುವುದೂ ಸಹ ಸಮಸ್ಯೆಯಾಗಿದೆ.

ಜಾಗಕ್ಕೂ ಬಾಡಿಗೆ: ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ತಾವು ವಹಿವಾಟು ನಡೆಸುವ ಜಾಗಕ್ಕೆ ಬಾಡಿಗೆ ಪಾವತಿ ಮಾಡಬೇಕು ಎಂಬುದು ಅಚ್ಚರಿ ವಿಷಯವೇ ಆಗಿದೆ. ಆದರೆ ಆ ಬಾಡಿಗೆ ಸರ್ಕಾರಕ್ಕೋ ಅಥವಾ ಸ್ಥಳೀಯ ಸಂಸ್ಥೆಗೋ ಕಟ್ಟುವುದಿಲ್ಲ. ಅದರ ಬದಲಾಗಿ ಸ್ಥಳೀಯ ಪುಡಾರಿಗಳಿಗೆ ತಿಂಗಳಿಗೆ ಇಂತಿಷ್ಟು ಹಣ ಕೊಟ್ಟು ಜಾಗ ಭದ್ರ ಮಾಡಿಕೊಳ್ಳಬೇಕು. ಇಂತಹ ಪುಡಾರಿಗಳಿಗೆ ಸ್ಥಳೀಯ ಪೊಲೀಸರ ಸಂಪೂರ್ಣ ಬೆಂಬಲ ಇರುತ್ತದೆ ಎಂಬುದು ಸುಳ್ಳೇನು ಅಲ್ಲ.

ಪೊಲೀಸರ ಕಿರುಕುಳ: ಬೀದಿ ವ್ಯಾಪಾರಿಗಳು ಪೊಲೀಸರಿಂದ ನಿತ್ಯ ಕಿರುಕುಳ ಎದುರಿಸುವ ಜತೆಯಲ್ಲೇ ಮಾಮೂಲಿ ಕೂಡ ಕೊಡಬೇಕು. ಇಲ್ಲದಿದ್ದರೆ ವ್ಯಾಪಾರ ಮಾಡುವ ಸ್ಥಳದಿಂದ ಎತ್ತಂಗಡಿ ಶಿಕ್ಷೆ ಎದುರಿಸಬೇಕಾಗುತ್ತದೆ. ಪೊಲೀಸರ ಕಿರುಕುಳ ತಪ್ಪಿಸಿ ಎಂಬ ಬೀದಿ ವ್ಯಾಪಾರಿಗಳ ಬೇಡಿಕೆಗೆ ಇದುವರೆಗೂ ಯಾವುದೇ ಸರ್ಕಾರ ಸ್ಪಂದಿಸಿಲ್ಲ ಎಂಬ ನೋವು ಈ ಬಡವರನ್ನು ಕಾಡುತ್ತಿದೆ.

ಸಾಲ ಸೌಲಭ್ಯ ಬೇಕು: ಬಡವರ ಬಂಧು ಯೋಜನೆಯನ್ನು ಸರ್ಕಾರ ನಿಲ್ಲಿಸಿದೆ. ಆದ್ದರಿಂದ ಹಣಕಾಸಿನ ಸಮಸ್ಯೆ ಎದುರಾಗಿದೆ. ಸರ್ಕಾರ ಮತ್ತೆ 50 ಸಾವಿರ ರೂ.ಗಳ ತನಕ ಸಾಲ ನೀಡುವ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯೂ ಇದೆ.

ಅಸಂಘಟಿತರೆಂದು ಗುರುತಿಸಿ: ಯಾವುದೇ ಇಲಾಖೆ ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರಿಗಳನ್ನು ಗುರುತಿಸುತ್ತಿಲ್ಲ. ಅಸಂಘಟಿತ ಕಾರ್ವಿುಕರೆಂದು ಗುರುತಿಸಿ ಕಟ್ಟಡ ಕಾರ್ವಿುಕರ ರೀತಿಯಲ್ಲಿ ಪ್ರತ್ಯೇಕ ಮಂಡಳಿ ರಚನೆ ಮಾಡಬೇಕು ಎಂಬುದು ಬೀದಿ ವ್ಯಾಪಾರಿಗಳ ಬೇಡಿಕೆಯಾಗಿದೆ.

ಸಿಗಲಿಲ್ಲ ಪರಿಹಾರ: ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಸರ್ಕಾರ ಬೀದಿ ವ್ಯಾಪಾರಿಗಳಿಗೆ 2000 ರೂ. ಪರಿಹಾರ ಘೋಷಿಸಿತ್ತು. ಆದರೆ ನೈಜ ವ್ಯಾಪಾರಿಗಳಿಗೆ ಪರಿಹಾರ ಮೊತ್ತ ಸಿಗಲಿಲ್ಲ. ಕೆಲವರಿಗೆ ಸಿಕ್ಕಿದ್ದು ಅವರಲ್ಲಿ ಬಹುತೇಕರು ಬೀದಿ ವ್ಯಾಪಾರಿಗಳಲ್ಲ ಎಂಬ ದೂರುಗಳಿವೆ. ಎಷ್ಟು ಜನರಿಗೆ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಿಲ್ಲ.

ಬೀದಿ ವ್ಯಾಪಾರಿಗಳು ಇ-ಶ್ರಮ್ ಪೋರ್ಟಲ್​ನಲ್ಲಿ ನೋಂದಾಯಿಸಿಕೊಳ್ಳಬಹು ದಾಗಿದೆ. ಅದರಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ 2 ಲಕ್ಷ ರೂ. ತನಕ ಆರೋಗ್ಯ ವಿಮೆ ಹಾಗೂ ಶಾಶ್ವತ ಅಂಗವಿಕಲರಾದರೆ 1 ಲಕ್ಷ ರೂ.ಗಳ ವಿಮೆ ಸಿಗಲಿದೆ.

| ಶಿವರಾಮ ಹೆಬ್ಬಾರ್ ಕಾರ್ವಿುಕ ಸಚಿವ

ಬೀದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದೇವೆ. ಕನಿಷ್ಠ ಗೌರವದ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಮ್ಮನ್ನು ಅಸಂಘಟಿತ ಕಾರ್ವಿುಕರೆಂದು ಗುರುತಿಸಿ ನೆರವಿಗೆ ಧಾವಿಸಬೇಕು. ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೋಗಲಾಡಿಸಬೇಕು.

| ಎಸ್. ಬಾಬು ಅಧ್ಯಕ್ಷ, ಬೀದಿ ವ್ಯಾಪಾರಿಗಳ ಸಂಘ

ನಮ್ಮ ಹಕ್ಕುಗಳಿಗೆ ಎರಡು ಬಾರಿ ಹೋರಾಟ ಮಾಡಿದ್ದೇವೆ. ಅದರ ಪರಿಣಾಮ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಆದರೆ ಇನ್ನೂ ಎಲ್ಲರಿಗೂ ಸಿಕ್ಕಿಲ್ಲ. ಲಾಕ್​ಡೌನ್ ನಂತರ ಅನೇಕರು ವ್ಯಾಪಾರವನ್ನೇ ಬಿಟ್ಟು ಬೀದಿ ಪಾಲಾಗಿದ್ದಾರೆ.

| ವಿನಯ್ ಬೆಂಗಳೂರು ಬೀದಿ ವ್ಯಾಪಾರಿಗಳ ಸಂಘ

ಸಮಸ್ಯೆಗಳೇನು?

  • 2017ರಿಂದ ಗುರುತಿನ ಚೀಟಿ ನೀಡುತ್ತಿದ್ದರೂ ಶೇ.100 ವಿತರಣೆ ಯಾಗಿಲ್ಲ, ಯಾವುದಾದರೂ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿಲ್ಲ
  • ಪಿಎಂ ಸ್ವನಿಧಿ ಯೋಜನೆಯಲ್ಲಿ 2000 ರೂ. ಸಾಲ ಬೀದಿ ವ್ಯಾಪಾರಿಗಳಿಗೆ ಸರಿಯಾಗಿ ಸಿಗುತ್ತಿಲ್ಲ, ಬೀದಿ ವ್ಯಾಪಾರಕ್ಕಾಗಿ ಸ್ಥಳ ಗುರುತಿಸಿ ಶೆಲ್ಟರ್​ಗಳನ್ನು ನಿರ್ವಿುಸಿ ಕೊಡುತ್ತಿಲ್ಲ
  • ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಿತಿಗಳನ್ನು ರಚನೆ ಮಾಡಿದ್ದರೂ ಅವು ಸರಿಯಾಗಿ ಸಭೆ ನಡೆಸುತ್ತಿಲ್ಲ
  • ಬಡವರ ಬಂಧು ಯೋಜನೆ ನಿಂತಿರುವುದು

ಬಡ್ಡಿಕೋರರ ಕಿರುಕುಳ: ಬೀದಿಬದಿ ವ್ಯಾಪಾರಿಗಳಿಗೆ ವಹಿವಾಟು ನಡೆಸುವುದಕ್ಕೆ ಬ್ಯಾಂಕ್ ಅಥವಾ ಸಹಕಾರ ಸಂಘಗಳಿಂದ ಹಣಕಾಸು ಸಹಾಯ ಸಿಗುತ್ತಿಲ್ಲ. ಆದ್ದರಿಂದ ಖಾಸಗಿ ಲೇವಾದೇವಿ ದಾರರಿಂದ ಮೀಟರ್ ಬಡ್ಡಿಗೆ ಸಾಲ ಪಡೆಯುವುದು ಹೆಚ್ಚಾಗುತ್ತಿದೆ. 10 ಸಾವಿರ ರೂ.ಗಳನ್ನು 100 ದಿನಗಳ ಮಟ್ಟಿಗೆ ಪಡೆದರೆ 1500 ರೂ.ಗಳ ಬಡ್ಡಿಯನ್ನು ಪಾವತಿ ಮಾಡುವ ಸ್ಥಿತಿ ಇದೆ.

ರಾಜ್ಯದಲ್ಲಿ 5 ಲಕ್ಷ ವ್ಯಾಪಾರಿಗಳು: ರಾಜ್ಯದಲ್ಲಿ ಸುಮಾರು ಐದು ಲಕ್ಷ ಜನ ಬೀದಿ ಬದಿ ವ್ಯಾಪಾರಿಗಳಿರ ಬಹುದೆಂಬ ಅಂದಾಜಿದೆ. ಅದರಲ್ಲಿ 3.5 ಲಕ್ಷ ಜನ ರಾಜಧಾನಿ ಬೆಂಗಳೂರಿನಲ್ಲೇ ಇದ್ದಾರೆ. ಇವರಲ್ಲಿ ಸುಮಾರು 1.5 ಲಕ್ಷ ಜನ ಬೀದಿ, ಬೀದಿಗಳಲ್ಲಿ ಗಾಡಿ ತಳ್ಳಿಕೊಂಡು ಹೋಗಿ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.

ಬೇಡಿಕೆಗಳೇನು?

  • ಎತ್ತಂಗಡಿ ಮಾಡಬಾರದು
  • ಕಾನೂನು ರೀತಿ ವ್ಯಾಪಾರಕ್ಕೆ ಅವಕಾಶ ನೀಡಬೇಕು
  • ಪೊಲೀಸರ ಕಿರುಕುಳ ನಿಲ್ಲಿಸಬೇಕು, ಇಎಸ್​ಐ ಸೌಲಭ್ಯ ನೀಡಬೇಕು
  • ಯಾವುದೇ ದೂರು ಇದ್ದರೂ ಸಮಿತಿಯಲ್ಲಿ ಚರ್ಚೆ ಮಾಡಬೇಕು
  • ವಸತಿ ಯೋಜನೆಯಲ್ಲಿ ಮೀಸಲಾತಿ ನೀಡಬೇಕು
  • ಆಹಾರ ಭದ್ರತೆ ನೀಡಬೇಕು, ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ಬ್ಯಾಂಕ್ ಕಿರುಕುಳ ತಪ್ಪಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net