

ಬೆಂಗಳೂರು: ನಾಯಕತ್ವಕ್ಕೆ ಸಂಬಂಧಿಸಿದಂತೆ ಪದೇಪದೆ ಗೊಂದಲಕಾರಿ ಹೇಳಿಕೆ ನೀಡಿ ಆಡಳಿತ ಪಕ್ಷದೊಳಗೊಂದು ಪ್ರತಿಪಕ್ಷ ಸೃಷ್ಟಿಸ ಹೊರಟವರಿಗೆ ರಾಜ್ಯ ಬಿಜೆಪಿ ಶಾಕ್ ನೀಡುವ ಮೂಲಕ 2023ರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬೇಗುದಿ ಬದಿಗೆ ಸರಿಸಿ ಮೈಕೊಡವಿ ಮೇಲೇಳಲು ಸಜ್ಜಾಗಿದೆ. ಜತೆಗೆ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಅಬಾಧಿತ, ಯಾರೂ ಒಡಕು ದನಿ ಎತ್ತಬಾರದೆಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ‘ದೀರ್ಘಾವಧಿ’ ನಂತರ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆದಿದ್ದು, ವರ್ಚಸ್ಸು ವೃದ್ಧಿ ಮಂತ್ರದೊಂದಿಗೆ ಜಂಟಿ ಕಾರ್ಯತಂತ್ರ ರೂಪಿಸಲಾಗಿದೆ. ಸಚಿವರು ಹಾಗೂ ರಾಜ್ಯಸಮಿತಿ ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಂಡು ಪ್ರಮುಖ ಐದಂಶಗಳ ಮೇಲೆ ವಿಸõತವಾಗಿ ರ್ಚಚಿಸಿದ್ದಾರೆ. ಇಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತಂದು, ಸರ್ಕಾರ ಮತ್ತು ಪಕ್ಷ ಒಟ್ಟಿಗೆ ಸಾಗಬೇಕೆಂಬ ದೃಢಸಂಕಲ್ಪ ಮಾಡಿದ್ದಾರೆ.
3ನೇ ಅಲೆ ಎದುರಿಸಲು ಸನ್ನದ್ಧ: ಕರೊನಾ ಎರಡನೇ ಅಲೆ ಪ್ರಭಾವ ತಗ್ಗಿತು, ಸೋಂಕು ಪ್ರಕರಣಗಳು ಕಡಿಮೆಯಾದವು ಎಂದು ಮೈ ಮರೆಯುವಂತಿಲ್ಲ. ಸಂಪೂರ್ಣ ಹತೋಟಿ ಸಾಧಿಸಿ, ಜನ-ಜೀವನ ಸಹಜ ಸ್ಥಿತಿಗೆ ಮರಳುವ ತನಕ ಕಾರ್ಯಕರ್ತರ ಕಾರ್ಯಾಚರಣೆ ಮುಂದುವರಿಯಲಿದೆ. ಸರ್ಕಾರ ಕೈಗೊಂಡ ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ಸಹಯೋಗ, ಜನ ಜಾಗೃತಿ, ಸೋಂಕಿತರಿಗೆ ಮೆಡಿಸಿನ್ ಕಿಟ್, ಕಷ್ಟದಲ್ಲಿರುವ ಕುಟುಂಬಗಳಿಗೆ ಸಚಿವ-ಶಾಸಕರಿಂದ ನೆರವು ಇತ್ಯಾದಿ ಚಟುವಟಿಕೆ ಯಥಾರೀತಿ ನಡೆಸಬೇಕು ಎಂದು ಸಭೆ ಸೂಚಿಸಿದೆ. ಸಂಭಾವ್ಯ ಮೂರನೇ ಅಲೆ ಎದುರಿಸುವ ರೀತಿ ಕುರಿತು ತಜ್ಞರ ಕಾರ್ಯಪಡೆ ಸರ್ಕಾರಕ್ಕೆ ಇಷ್ಟರಲ್ಲೇ ವರದಿ ಸಲ್ಲಿಸಲಿದ್ದು, ಸಂಘಟನಾ ಬಲವು ಸನ್ನದ್ಧ ಸ್ಥಿತಿಯಲ್ಲಿರಬೇಕು, ಜಿಲ್ಲಾ, ತಾಲೂಕು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸವಲತ್ತು ಲಭ್ಯತೆ, ಕೊರತೆ ಮಾಹಿತಿ ಸಂಗ್ರಹಿಸಿ ಸಚಿವ-ಶಾಸಕರಿಗೆ ಸಲ್ಲಿಸಬೇಕು. ಬೂತ್ನಿಂದ ಜಿಲ್ಲಾಮಟ್ಟದವರೆಗೆ ಕಾರ್ಯಕರ್ತರು ವೈಯಕ್ತಿಕ ಸುರಕ್ಷತೆಯೊಂದಿಗೆ ಅಗತ್ಯ ಸೇವೆ ಸಲ್ಲಿಸುವುದಕ್ಕೆ ಸಜ್ಜಾಗಬೇಕು ಎಂದು ಸೂಚಿಸಲು ಸಭೆ ತೀರ್ವನಿಸಿದೆ.
ಫಲಿತಾಂಶದ ಅವಲೋಕನ: ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ದಕ್ಕಿದೆ. ಮಸ್ಕಿಯಲ್ಲಿ ಆಡಳಿತ ವಿರೋಧಿ ಅಲೆ, ಎದುರಾಳಿ ಅಭ್ಯರ್ಥಿ ಬಗೆಗಿನ ಅನುಕಂಪ, 5ಎ ಕಾಲುವೆ ಆಂದೋಲನವು ಸೋಲಿಗೆ ಕಾರಣಗಳಾದವು. ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಘೋಷಿಸಿ ಮುಂಚಿತವಾಗಿ ತಯಾರಿ ನಡೆಸಿದ್ದು, ಎಂಇಎಸ್ ಅಭ್ಯರ್ಥಿ ಗಮನಾರ್ಹ ಮತಗಳಿಕೆ, ಪಂಚಮಸಾಲಿ ಫ್ಯಾಕ್ಟರ್ನಿಂದ ಬೆಳಗಾವಿಯಲ್ಲಿ ಕಡಿಮೆ ಮತ ಅಂತರದಿಂದ ಗೆದ್ದಿತು ಎಂಬುದನ್ನು ಸಭೆ ಅವಲೋಕಿಸಿತು ಎಂದು ಮೂಲಗಳು ತಿಳಿಸಿವೆ.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಅಶ್ವಥ್ ನಾರಾಯಣಗೌಡ, ಸಿದ್ದರಾಜು ಭಾಗವಹಿಸಿದ್ದರು.
ಬಿಎಸ್ವೈ ಸರ್ವಸಮ್ಮತ ನಾಯಕ: ಸಿಎಂ ಯಡಿಯೂರಪ್ಪ ನಮ್ಮ ಪಕ್ಷದ ಸರ್ವಸಮ್ಮತ ನಾಯಕ, ಯಾವ ಶಾಸಕರೂ ನಾಯಕತ್ವ ಬದಲಾವಣೆ ಕುರಿತು ಮಾತನಾಡುವಂತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಫರ್ವನು ಹೊರಡಿಸಿದ್ದಾರೆ. ‘ಸಿಎಂ ಬದಲಾವಣೆ ಬಗ್ಗೆ ಒಬ್ಬ ಶಾಸಕ ಮಾತನಾಡಲು ಸಾಧ್ಯವಿಲ್ಲ, ಈ ವಿಚಾರದಲ್ಲಿ ಯಾರು ಕೂಡ ಮಾತನಾಡಬಾರದು ಎಂದು ಎಲ್ಲ ಶಾಸಕರಿಗೂ ಸೂಚಿಸಿದ್ದೇನೆ’ ಎಂದು ಅವರು ಮಾಧ್ಯಮಗಳಿಗೆ ಶುಕ್ರವಾರ ತಿಳಿಸಿದರು. ಕರೊನಾಗೆ ಸಂಬಂಧಿಸಿದ ಕೆಲಸ ಮಾತ್ರ ಮಾಡಬೇಕು. ಅದನ್ನು ಮೀರಿ ಬೇರೆ ಏನಾದರೂ ಮಾತನಾಡಿದರೆ ಪಕ್ಷ ಗಂಭೀರವಾಗಿ ಗಮನಿಸುತ್ತದೆ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ‘ಈಗಾಗಲೇ ನಾನು ಕರೆ ಮಾಡಿ ಎಲ್ಲರ ಜತೆ ಮಾತನಾಡಿದ್ದೇನೆ, ಯಾರೂ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ’ ಎಂದು ಕಟೀಲ್ ಹೇಳಿದರು.