

ಶ್ರೀಕೃಷ್ಣ ಪರಮಾತ್ಮ (Krishna) ಗೋಪಿಕಾಸ್ತ್ರೀಯರ ಮಧ್ಯದಿಂದ ಒಂದು ಕ್ಷಣದೊಳಗೆ ಮಾಯವಾಗಿದ್ದಾನೆ. ಪರಮಾತ್ಮ ಅವರಿಗೆ ಅಂತರ್ಹಿತನಾಗಿ ಅದೃಶ್ಯನಾಗಿ ಹೋದಾಗ ಅವರಿಗೆ ಬಹಳ ದುಃಖವಾಗಿದೆ. ಎಲ್ಲ ಕಡೆಯೂ ಹುಡುಕಿದ್ದಾರೆ. ಮಧ್ಯದಲ್ಲಿ ಅಶ್ವತ್ಥ ವೃಕ್ಷವನ್ನು ನೋಡಿ ಕೇಳಿದ್ದಾರೆ. ಅಶ್ವತ್ಥವೃಕ್ಷ ದೇವತೆಗಳ ಸನ್ನಿಧಾನದಿಂದ ಕೂಡಿದ ವೃಕ್ಷ. ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ|
ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ|| - ಮಧ್ಯದಲ್ಲಿ ವಿಷ್ಣುವಿನ ಸನ್ನಿಧಾನದಿಂದ ಕೂಡಿದ ವೃಕ್ಷ. ಮಹಾಭಾರತದಲ್ಲಿ ಯುಧಿಷ್ಠಿರನ ಮುಂದೆ ಹೇಳುವಾಗ ಅಶ್ವತ್ಥದಲ್ಲಿ ನನ್ನ ತುಂಬು ಸನ್ನಿಧಾನವಿದೆ ಎಂದು ಶ್ರೀಕೃಷ್ಣ ಹೇಳುತ್ತಾನೆ. ಗೋಪಿಕಾಸ್ತ್ರೀಯರು ಅಶ್ವತ್ಥನ ಬಳಿ ಬಂದು ಶ್ರೀಕೃಷ್ಣ ಎಲ್ಲಿದ್ದಾನೆ ತೋರಿಸು. ಕೊನೆಯ ಪಕ್ಷ ನಿನ್ನೊಳಗೆ ಇರುವ ಕೃಷ್ಣನನ್ನಾದರೂ ತೋರಿಸು. ಅದೂ ಆಗದೇ ಇದ್ದರೆ ನಿಮ್ಮ ಹೆಸರನ್ನಾದರೂ ನಮಗೆ ಬಿಟ್ಟು ಕೊಡು ಎಂದು ಅಳುತ್ತಿದ್ದಾರೆ. ಹೆಸರು ಬಿಟ್ಟು ಕೊಡುವುದು ಎಂದರೆ ‘ಶ್ವತ್ಥ’ ಎಂದರೆ ನಾಳೆ ಇರುವವನು.
ಅಶ್ವತ್ಥ ಎಂದರೆ ನಾಳೆ ಇಲ್ಲದೇ ಇರುವವನು ಅಥವಾ ಇವತ್ತೇ ಮರಣ ಹೊಂದುವವನು. ಕೃಷ್ಣನನ್ನಾದರೂ ತೋರಿಸು, ಇಲ್ಲ ಸಾಯುವುದಕ್ಕಾದರೂ ಅನುಮತಿಯನ್ನು ಕೊಡು ಎಂದು ಅಶ್ವತ್ಥಕ್ಕೆ ಬೇಡಿಕೊಂಡಿದ್ದಾರೆ. ಹೀಗೆ ನಾನಾ ವೃಕ್ಷಗಳ ಎದುರಿಗೆ ಹೋಗಿ ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ. ಯಾವ ವೃಕ್ಷವೂ ಉತ್ತರ ಕೊಡುತ್ತಿಲ್ಲ. ಕೊನೆಗೆ ಪಾದಗಳ ಚಿಹ್ನೆಯನ್ನು ನೋಡುವ ಭಾಗ್ಯ ಸಿಕ್ಕಿತಲ್ಲ ಎಂದು ಪಾದಧೂಳಿಗಳ ಸ್ಪರ್ಶ ಮಾಡಿ ಅದನ್ನು ತಲೆಗೆ ಒತ್ತಿಕೊಳ್ಳುತ್ತ ಮುಂದೆ ಸಾಗಿದ್ದಾರೆ. ಇವರಿಗೆ ಭಕ್ತಿ ಸ್ವಲ್ಪ ಮರೆತಿತ್ತು. ಕೃಷ್ಣ ನಮ್ಮನ್ನು ಅಪೇಕ್ಷೆ ಪಡುತ್ತಾನೆ ನಮಗೆ ಸಮಾನರು ಯಾರೂ ಈ ಪ್ರಪಂಚದೊಳಗೆ ಇಲ್ಲ ಎಂಬ ಅಹಂಕಾರ ಆವರಿಸಿತ್ತು. ದೇವರು ಯಾರಿಗೂ ವಶನಾಗದ ಸ್ವರಮಣನು. ಆತ್ಮಾರಾಮನಾದ ಶ್ರೀಕೃಷ್ಣನು ತನಗೆ ಯಾರ ಅಪೇಕ್ಷೆಯೂ ಇಲ್ಲ ಎನ್ನುವುದನ್ನು ಈ ಮೂಲಕ ತಿಳಿಸುತ್ತಿದ್ದಾನೆ.