ಅತ್ಯಾಚಾರ ಪ್ರಕರಣದ ಚರ್ಚೆಯನ್ನು ಮಾಧ್ಯಮಗಳು ನಿಲ್ಲಿಸಬೇಕು; Mamata Banerjee ಹೀಗೆಳಿದ್ದೇಕೆ?

Untitled-design-2024-10-06T185519.589
Published on

ಕೋಲ್ಕತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 10 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರು ಪೊಲೀಸರಿಗೆ ಭಾನುವಾರ(ಅಕ್ಟೋಬರ್​​ 6) ಸೂಚಿಸಿದ್ದಾರೆ. ಮೂರು ತಿಂಗಳೊಳಗೆ ಅಪರಾಧಿಗಳಿಗೆ ಮರಣದಂಡನೆ ವಿಧಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕೋಲ್ಕತಾ ಪೊಲೀಸ್ ಬಾಡಿ ಗಾರ್ಡ್ ಲೈನ್‌ನಲ್ಲಿ ಹಲವಾರು ದುರ್ಗಾ ಪೂಜೆಗಳನ್ನು ವಾಸ್ತವಿಕವಾಗಿ ಉದ್ಘಾಟಿಸಿದ ನಂತರ ಮಮತಾ ಬ್ಯಾನರ್ಜಿ ಅವರು ಮಾತನಾಡಿ, ಅಪರಾಧಕ್ಕೆ ಬಣ್ಣ, ಜಾತಿ ಅಥವಾ ಧರ್ಮವಿಲ್ಲ. ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ಮಾಧ್ಯಮಗಳ ವಿಚಾರಣೆಯನ್ನು ನಿಲ್ಲಿಸಬೇಕು. ಇದು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು.

ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೀಡಾದ ವಿದ್ಯಾರ್ಥಿನಿಯ ಮೃತದೇಹವನ್ನು ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೋಲ್ಕತಾ ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್‌ನ ನ್ಯಾಯಮೂರ್ತಿ ತೀರ್ಥಂಕರ ಘೋಷ್, ಬಾಲಕಿಯ ಪಾಲಕರ ಅರ್ಜಿಯ ವಿಚಾರಣೆ ನಡೆಸಿದಾಗ ಸೋಮವಾರದಂದು ಬರುಯಿಪುರ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಸಮ್ಮುಖದಲ್ಲಿ ಕಲ್ಯಾಣಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಸೂಚಿಸಿದರು. ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವಂತೆಯೂ ಹೈಕೋರ್ಟ್ ಆದೇಶಿಸಿದೆ.

ಏಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಅಗತ್ಯ ಮೂಲಸೌಕರ್ಯಗಳ ಕೊರತೆಯಿದ್ದರೆ ಕಲ್ಯಾಣಿಯಲ್ಲಿರುವ ಜವಾಹರಲಾಲ್ ನೆಹರು ಸ್ಮಾರಕ ಆಸ್ಪತ್ರೆಯಲ್ಲಿ ನಡೆಸಬೇಕು ಎಂದು ಹೈಕೋರ್ಟ್ ಹೇಳಿದೆ. ಆದರೆ, ಮರಣೋತ್ತರ ಪರೀಕ್ಷೆಯನ್ನು ಏಮ್ಸ್ ವೈದ್ಯರು ಮಾಡಬೇಕೇ ಹೊರತು ಸರ್ಕಾರಿ ಆಸ್ಪತ್ರೆಯ ವೈದ್ಯರಲ್ಲ ಎಂದು ತಿಳಿಸಿದೆ. ಸದ್ಯ ವಿದ್ಯಾರ್ಥಿಯ ಮೃತದೇಹ ಕಂಟಪುಕೂರಿನ ಶವಾಗಾರದಲ್ಲಿದೆ. ಅಲ್ಲಿ ಮೊದಲ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net