

ಲಖನೌ: ಮಹಿಳೆ ಮೇಲೆ ಆಸಿಡ್ ದಾಳಿ ನಡೆಯುವ ಘಟನೆಯನ್ನು ನಾವು ನೋಡಿರುತ್ತೇವೆ. ಆದರೆ ಸದ್ಯ ಬೆಳಕಿಗೆ ಬಂದಿರುವ ಪ್ರಕರಣ ಇದಕ್ಕೆ ತದ್ವಿರುದ್ಧವಾಗಿದೆ. ತನ್ನ ಪ್ರಿಯಕರಣ ಮೇಲೆ ಮಹಿಳೆಯೊಬ್ಬರು ಆಸಿಡ್ ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದ ಅಲಿಗಢನಲ್ಲಿ ನಡೆದಿದೆ. ಪ್ರಿಯಕರನ ಮೇಲೆ ಆಸಿಡ್ ಎಸೆಯುವ(Acid Attack) ಸಮಯದಲ್ಲಿ ಮಹಿಳೆಯ ಮೈಮೇಲೆ ಕೆಲವು ಹನಿಗಳು ಬಿದ್ದಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯನ್ನು ವರ್ಷಾ ಎಂದು ಹಾಗೂ ಆಸಿಡ್ ದಾಳಿಗೊಳಗಾದ ಯುವಕನನ್ನು ವಿವೇಕ್ ಎಂದು ಗುರುತಿಸಲಾಗಿದೆ. 12 ವರ್ಷಗಳಿಂದ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ಅದಕ್ಕಾಗಿ ಆಸಿಡ್ ದಾಳಿ ನಡೆಸಿದ್ದಾಗಿ ಮಹಿಳೆ ಹೇಳಿದ್ದಾಳೆ. ಈ ಘಟನೆಯಲ್ಲಿ ಹಲವು ಅಂಶಗಳಿದ್ದು, ತನಿಖೆಯ ನಂತರವೇ ತಿಳಿಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಹುಡುಗಿ ತನ್ನ ಪ್ರಿಯಕರನನ್ನು ರೆಸ್ಟೋರೆಂಟ್‌ಗೆ ಭೇಟಿಯಾಗಲು ಕರೆದಿದ್ದಳು. ಇಬ್ಬರೂ ಮೇಜಿನ ಬಳಿ ಕುಳಿತು ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಹಿಳೆ ಬ್ಯಾಗ್‌ನಿಂದ ಆಸಿಡ್ ತುಂಬಿದ ಬಾಟಲಿಯನ್ನು ಹೊರತೆಗೆದು ಹುಡುಗನ ಮೇಲೆ ಎಸೆದಿದ್ದಾಳೆ. ಈ ವೇಳೆ ಮಹಿಳೆಯ ಮೇಲೆ ಕೆಲವು ಹನಿಗಳು ಬಿದ್ದಿವೆ.
ಈ ಕುರಿತು ಇನ್ನೂ ಯಾವುದೇ ದೂರು ದಾಖಲಾಗಿಲ್ಲ. ಮಹಿಳೆಗೆ ಮದುವೆಯಾಗಿದೆ. ಯುವಕ ಆಕೆಯ ಮಾಜಿ ಗೆಳೆಯ ಎನ್ನಲಾಗಿದೆ. ತನ್ನನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದ ಎಂದು ಮಹಿಳೆ ಹೇಳಿದ್ದಾಳೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಬೈಕ್ ನಂಬರ್ ಹಾಗೂ ಮೊಬೈಲ್ ಆಧಾರದಲ್ಲಿ ಯುವಕನನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ತಿಳಿದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಅಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಹುಡುಗಿ ಬೆಳಗ್ಗೆ 11:30ರ ಸುಮಾರಿಗೆ ಬಂದಳು. ರೆಸ್ಟೋರೆಂಟ್ ಇನ್ನೂ ಕ್ಲೀನ್ ಆಗದ ಕಾರಣ ಹೊರಗೆ ಕೂರುವಂತೆ ಹೇಳಿದೆ. ಆದರೆ ಆಕೆ ಒಳಗೆ ಕುಳಿತುಕೊಳ್ಳುವುದಾಗಿ ಹೇಳಿದಳು. ಸ್ವಲ್ಪ ಸಮಯದ ನಂತರ ಹುಡುಗ ಬಂದನು. ಊಟ ಆರ್ಡರ್ ನಂತರ ಮಾಡುತ್ತೇವೆ ಎಂದು ಹೇಳಿ ಮಾತನಾಡುತ್ತಿದ್ದರು. ಆ ಸಮಯದಲ್ಲೇ ಹುಡುಗಿ ಅವನ ಮೇಲೆ ಆಸಿಡ್ ಸುರಿದು 12 ವರ್ಷಗಳಿಂದ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂದು ಕೂಗಿದಳು ಎಂದು ರೆಸ್ಟೋರೆಂಟ್ ಮಾಲೀಕರು ತಿಳಿಸಿದ್ದಾರೆ.
ಸ್ವತಃ ಆ ಮಹಿಳೆಯೆ ತನ್ನೊಂದಿಗೆ ಸ್ಟೀಲ್ ಗ್ಲಾಸ್, ಬಾಟಲಿ ಮತ್ತು ಬ್ಯಾಗ್ ತಂದಿರುವುದಾಗಿಯೂ, ತನ್ನ ಮೊಬೈಲ್ ಫೋನ್ ಕೂಡ ಇಲ್ಲಿದ್ದು, ಉಳಿದ ಆಸಿಡ್ ತನ್ನ ಬ್ಯಾಗ್ನಲ್ಲಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಸೆಂಟರ್ ಪಾಯಿಂಟ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ. ಪರಸ್ಪರ ಪರಿಚಯವಿದ್ದ ಕಾರಣ ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪರಸ್ಪರ ಭಿನ್ನಾಭಿಪ್ರಾಯದಿಂದ ಈ ಘಟನೆ ನಡೆದಿದೆ ಎಂದು ನಂಬಲಾಗಿದೆ. ಮಹಿಳೆ ಮದುವೆಯಾಗಿದ್ದಾಳೆ, ಎರಡೂ ಕಡೆಯವರು ಭೇಟಿಯಾದರೆ ಮಹಿಳೆಯೊಂದಿಗೆ ಮಾತನಾಡಿದ ನಂತರ ಹೆಚ್ಚಿನ ಮಾಹಿತಿ ತಿಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)