ಹೈದರಾಬಾದ್: ಅಕ್ರಮ ಭೂಒತ್ತುವರಿ ಆರೋಪದಡಿ ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ(Nagarjuna Akkineni ) ವಿರುದ್ಧ ಹೈದರಾಬಾದ್‌ನ ಮಾದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜನಂ ಕೋಸಂ ಮಾನಸಾಕ್ಷಿ ಫೌಂಡೇಶನ್‌ನ ಎನ್‌ಜಿಒ ಅಧ್ಯಕ್ಷ ಕಾಸಿರೆಡ್ಡಿ ಭಾಸ್ಕರ ರೆಡ್ಡಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆಯಂತೆ.

ನಾಗಾರ್ಜುನ ಅವರು ನೂರಾರು ಕೋಟಿ ಬೆಲೆ ಬಾಳುವ ಜಾಗದಲ್ಲಿ ಆಗಸ್ಟ್‌ನಲ್ಲಿ ಕೆಡವಲಾದ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ. ವಿವಾದಿತ ಭೂಮಿ ತಮ್ಮಿಡಿಕುಂಟಾ ಕೆರೆಯ ಫುಲ್ ಟ್ಯಾಂಕ್ ಲೆವೆಲ್ (ಎಫ್‌ಟಿಎಲ್) ಮತ್ತು ಬಫರ್ ಝೋನ್ ವ್ಯಾಪ್ತಿಗೆ ಬರುತ್ತದೆ ಎಂದು ವರದಿಯಾಗಿದೆ.
ಎನ್ ಕನ್ವೆನ್ಷನ್ ಸೆಂಟರ್ ಮದುವೆಗಳು ಮತ್ತು ಕಾರ್ಪೊರೇಟ್ ಕೂಟಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಜನಪ್ರಿಯ ಸ್ಥಳವಾಗಿದೆ. ನಾಗಾರ್ಜುನ ಹಲವು ವರ್ಷಗಳಿಂದ ಅತಿಕ್ರಮಣ ಭೂಮಿಯಿಂದ ಅಕ್ರಮ ಆದಾಯವನ್ನು ಗಳಿಸುತ್ತಿದ್ದಾರೆ. ಈ ಆಪಾದಿತ ಉಲ್ಲಂಘನೆಗಳಿಗಾಗಿ ಅವರ ಬಂಧನ ಸೇರಿದಂತೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಕಾಸಿರೆಡ್ಡಿ ಹೇಳಿದ್ದಾರೆ ಎನ್ನಲಾಗಿದೆ. ದೂರಿನ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಈ ಹಿಂದೆ ಹೈಡ್ರಾ ಅವರು ಯಾವುದೇ ಸೂಚನೆ ನೀಡದೆ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಕೆಡವಿದ್ದರು. ಆಗ, ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಎನ್ ಕನ್ವೆನ್ಷನ್ ಕಟ್ಟಡಗಳನ್ನು ಕೆಡವಿದ ಬಗ್ಗೆ ನಾಗಾರ್ಜುನ ಅಸಮಾಧಾನ ವ್ಯಕ್ತಪಡಿಸಿದರು. ಇದು ಸಂಪೂರ್ಣ ಖಾಸಗಿ ಜಮೀನಾಗಿದ್ದು, ಕೆರೆ ಭೂಮಿಯನ್ನು ಒಂದು ಇಂಚು ಕೂಡ ಒತ್ತುವರಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಆ ನಂತರ ನಾಗಾರ್ಜುನ ಈ ಬಗ್ಗೆ ಮೌನ ವಹಿಸಿದ್ದರು.
ಸಮಂತಾ-ನಾಗ ಚೈತನ್ಯ ವಿಚ್ಛೇದನದ ಕುರಿತು ಸಚಿವ ಕೊಂಡ ಸುರೇಖಾ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಒಂದು ದಿನದ ನಂತರ ನಾಗಾರ್ಜುನ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)