

ಕಡೂರು: ಸಾರ್ವಜನಿಕರು ನೇರವಾಗಿ ಪೊಲೀಸರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಜನರ ಸಹಕಾರ ಅವಶ್ಯ ಎಂದು ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ವಾರ್ಷಿಕ ಪರಿವೀಕ್ಷಣೆಗಾಗಿ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಡೂರು ಪಟ್ಟಣಕ್ಕೆ ಸಂಬಂಧಿಸಿ ಹಲವಾರು ವಿಚಾರಗಳ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಟ್ರಾಫಿಕ್ ಸಮಸ್ಯೆ ಪರಿಹಾರ ಕುರಿತು ಚರ್ಚೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಪೊಲೀಸ್ ಇಲಾಖೆ ಎಂದರೆ ಕೆಲವರಿಗೆ ಭಯಪಡುತ್ತಾರೆ. ಆದರೆ ಪೊಲೀಸರು ಇರುವುದೇ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು. ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಅವಕಾಶವಿದೆ. ಕಾನೂನಿನ ಇತಿಮಿತಿಯಲ್ಲಿ ಪರಿಹರಿಸಲು ಇಲಾಖೆ ಸದಾ ಸಿದ್ಧವಿದೆ. ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಯಾರಿಗೇ ಅಸಮಾಧಾನವಿದ್ದರೂ ಅದನ್ನು ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತರಬಹುದು ಎಂದರು.
ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಹಾಲಮೂರ್ತಿ, ಸಿಪಿಐ ಶಿವಕುಮಾರ್, ಪಿಎಸ್‌ಐಗಳಾದ ಧನಂಜಯ್, ಶೋಭಾ, ನವೀನ್ ಇತರರಿದ್ದರು.