

ನವದೆಹಲಿ : ಇಂದು ಬೆಳಿಗ್ಗೆ ಟ್ವಿಟರ್, ಭಾರತದಲ್ಲಿನ ತನ್ನ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ದೇಶದ ಹೊಸ ಐಟಿ ಕಾನೂನುಗಳಿಂದ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕುತ್ತು ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿಕೆ ನೀಡಿತ್ತು. ಟ್ವಿಟರ್ ಇಂಡಿಯಾದ ದೆಹಲಿ ಮತ್ತು ಗುರ್ಗಾವ್ನ ಕಛೇರಿಗಳಿಗೆ ಸೋಮವಾರ ದೆಹಲಿ ಪೊಲೀಸ್ ಭೇಟಿ ನೀಡಿ ತನಿಖೆಯಲ್ಲಿ ಪಾಲ್ಗೊಳ್ಳಲು ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ಟ್ವಿಟರ್ ಈ ಹೇಳಿಕೆ ನೀಡಿತ್ತು.
ಈ ಬಗ್ಗೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ವಾಕ್ಸ್ವಾತಂತ್ರ್ಯಕ್ಕೆ ಶತಮಾನಗಳಿಂದಲೂ ಮನ್ನಣೆ ಕೊಡುತ್ತಾ ಬಂದಿರುವ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತಕ್ಕೆ ಟ್ವಿಟರ್ ತನ್ನ ನಿಯಮಗಳನ್ನು ನಿರ್ದೇಶಿಸುವ ಪ್ರಯತ್ನ ಮಾಡುತ್ತಿದೆ. "ವಾಕ್ಸ್ವಾತಂತ್ರ್ಯ ಒಂದು ವಿದೇಶೀ ಲಾಭಾಕಾಂಕ್ಷಿ ಕಂಪೆನಿಯಾದ ಟ್ವಿಟರ್ನ ಪೂರ್ವಭಾವಿಯಲ್ಲ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಮತ್ತು ಅದರ ಸಂಸ್ಥೆಗಳ ಬದ್ಧತೆಯಾಗಿದೆ" ಎಂದು ಹೇಳಿದೆ. "ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಂಡು, ವಿನಾಕಾರಣ ಭಾರತಕ್ಕೆ ಕೆಟ್ಟ ಹೆಸರು ತರುವಂತಹ ಆಧಾರವಿಲ್ಲದ ಹೇಳಿಕೆಯನ್ನು ಟ್ವಿಟರ್ ನೀಡಿರುವುದು ಖಂಡನೀಯ" ಎಂದಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಸಚಿವಾಲಯವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಟ್ವಿಟರ್ ತನ್ನ ನಡವಳಿಕೆಯಿಂದ ಮತ್ತು ಉದ್ದೇಶಪೂರಿತವಾಗಿ ನಿಯಮಗಳನ್ನು ಪಾಲಿಸಲು ನಿರಾಕರಿಸುವ ಮೂಲಕ ಭಾರತದ ಕಾನೂನು ವ್ಯವಸ್ಥೆಯನ್ನು ಅಪಮಾನಿಸುತ್ತಿದೆ ಎಂದಿದೆ. ಟ್ವಿಟರ್ ಯದ್ವಾತದ್ವಾ ಮಾತನಾಡುವುದನ್ನು ಬಿಟ್ಟು, ದೇಶದ ಕಾನೂನುಗಳನ್ನು ಪಾಲಿಸಬೇಕು ಎಂದಿರುವ ಸಚಿವಾಲಯ, "ಕಾನೂನುಗಳನ್ನು ರಚಿಸುವುದು ಸರ್ಕಾರದ ಕೆಲಸ. ಕೇವಲ ಒಂದು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್ ಆ ಬಗ್ಗೆ ನಿಯಮಗಳನ್ನು ಹೇಳುವ ಅರ್ಹತೆ ಹೊಂದಿಲ್ಲ" ಎಂದಿದೆ. (ಏಜೆನ್ಸೀಸ್)