ವಂದೇ ಭಾರತ ರೈಲಿನ ಮೇಲೆ ಕಲ್ಲು ತೂರಾಟ; ಪದೆಪದೇ ಮರುಕಳಿಸುತ್ತಿರುವುದೇಕೆ?

vande bharat final
Published on

ಭುವನೇಶ್ವರ: ಭಾರತದಲ್ಲಿ ಈಗ ಸಾಕಷ್ಟು ಆಕರ್ಷಣೆ, ಕ್ರೇಜ್​ ಮೂಡಿಸಿರುವ ರೈಲು ವಂದೇ ಭಾರತ. ಇದರಲ್ಲಿ ಪ್ರಯಾಣ ಮಾಡುವುದೆಂದರೆ ವಿಮಾನದಲ್ಲಿ ಸಾಗಿದಂತೆ ಭಾಸವಾಗುತ್ತದೆ. ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯಗಳನ್ನು ಈ ರೈಲು ಒಳಗೊಂಡಿರುವುದೇ ಇದಕ್ಕೆ ಕಾರಣ. ಹೀಗಾಗಿ, ಗಂಟೆಗೆ 180 ಕಿ.ಮೀ.ವರೆಗೂ ವೇಗವಾಗಿ ಚಲಿಸುವ ಸಾಮರ್ಥ್ಯವಿರುವ ಈ ಸೆಮಿಸ್ಪೀಡ್​ ರೈಲಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ, ತಮ್ಮ ಪ್ರದೇಶದಲ್ಲಿ ಇಂತಹ ರೈಲು ಸಂಚಾರ ಆರಂಭಿಸಬೇಕೆಂಬ ಒತ್ತಾಯ ಎಲ್ಲೆಡೆಯ ಜನರಿಂದ ಕೇಳಿಬರುತ್ತಿದೆ.

ಕಣ್ಮನ ಸೆಳೆಯುವ ವಂದೇ ಭಾರತ ರೈಲಿನ ಮೇಲೆ ಕಲ್ಲು ತೂರುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಇದಕ್ಕೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲವಾದರೂ ರೈಲು ಹಳಿಗಳ ಪಕ್ಕ ವಾಸಿಸುವ ಕಿಡಿಗೇಡಿಗಳು ಸುಮ್ಮನೆ ಇಂತಹ ಕೃತ್ಯ ಎಸಗುತ್ತಾರೆ ಎಂದು ಅಂದಾಜಿಸಲಾಗಿದೆ. ಈಗ ಭಾನುವಾರ ರಾತ್ರಿ ರೂರ್ಕೆಲಾ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿದೆ.

ಭಾನುವಾರ ರಾತ್ರಿ ಒಡಿಶಾದ ಧೆಂಕನಲ್-ಅಂಗುಲ್ ರೈಲ್ವೆ ವಿಭಾಗದ ಮೆರಮಂಡಲಿ ಮತ್ತು ಬುಧಪಾಂಕ್ ನಿಲ್ದಾಣಗಳ ನಡುವೆ ಸಂಭವಿಸಿದ ಈ ಕಲ್ಲು ತೂರಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲ.

"ರೈಲು ಸಂಖ್ಯೆ 20835 ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಭುವನೇಶ್ವರ-ಸಂಬಲ್‌ಪುರ ರೈಲು ಮಾರ್ಗದ ಧೆಂಕನಲ್-ಅಂಗುಲ್ ರೈಲ್ವೆ ವಿಭಾಗದಲ್ಲಿ ಮೆರಮಂಡಲಿ ಮತ್ತು ಬುಧಪಾಂಕ್ ನಡುವೆ ಕೆಲವು ಕಲ್ಲು ತೂರಾಟಗಾರರು ಗುರಿಯಾಗಿಸಿದ್ದಾರೆ" ಎಂದು ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ಹೇಳಿಕೆಯಲ್ಲಿ ತಿಳಿಸಿದೆ.

ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್‌ನ ಕಿಟಕಿಗೆ ಹಾನಿಯಾಗಿದೆ. ಅಲ್ಲದೆ, ರೈಲು 13 ನಿಮಿಷಗಳ ವಿಳಂಬದೊಂದಿಗೆ ಪುರಿ ತಲುಪಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ವ ಕರಾವಳಿ ರೈಲ್ವೇಯು ಜನರಿಗೆ ವಿಶೇಷವಾಗಿ ರೈಲು ಹಳಿಗಳ ಬಳಿ ವಾಸಿಸುವವರಿಗೆ ರೈಲುಗಳ ಮೇಲೆ ಕಲ್ಲು ಎಸೆಯದಂತೆ ಜಾಗೃತಿ ಮೂಡಿಸಲು ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರೈಲ್ವೆಯ ಭದ್ರತಾ ವಿಭಾಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಗೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಕಲ್ಲು ತೂರಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆಯ ಭದ್ರತಾ ವಿಭಾಗವು ಸ್ಥಳೀಯ ಪೊಲೀಸರೊಂದಿಗೆ ಸಮನ್ವಯದೊಂದಿಗೆ ಅಪರಾಧಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಹೇಳಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮೇಲೆ ಕಲ್ಲು ತೂರಾಟದ ಇದೇ ರೀತಿಯ ಘಟನೆಗಳು ಈ ಹಿಂದೆ ದೇಶದ ವಿವಿಧ ಭಾಗಗಳಿಂದ ವರದಿಯಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net