ಡಾ. ಸುಧಾಕರ್​ ಗೆದ್ರೆ ರಾಜೀನಾಮೆ ಕೊಡ್ತೀನಿ ಎಂದಿದ್ದ ಶಾಸಕ ಪ್ರದೀಪ್ ಈಶ್ವರ ಮನೆಯ ಮೇಲೆ ಕಲ್ಲು ತೂರಾಟ!

K Sudhakar
Published on

ಚಿಕ್ಕಬಳ್ಳಾಪುರ: ನಿನ್ನೆ (ಜೂನ್​ 04) ಹೊರಬಿದ್ದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎಗೆ ಬಹುಮತ ಸಿಕ್ಕಿದೆ. ಬಿಜೆಪಿ ಏಕಾಂಗಿಯಾಗಿ ಮೆಜಾರಿಟಿ ಪಡೆಯದಿದ್ದರೂ ಮೈತ್ರಿಪಕ್ಷಗಳ ಸಹಕಾರದಿಂದ 3ನೇ ಬಾರಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಬಹುದಾಗಿದೆ. ಕರ್ನಾಟಕದಲ್ಲೂ 17 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಸೋತವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಅವರಲ್ಲಿ ಕೆ. ಸುಧಾಕರ್​ ಕೂಡ ಒಬ್ಬರು. ರಾಜ್ಯ ಚುನಾವಣೆಯಲ್ಲಿ ಪ್ರದೀಪ್​​ ಈಶ್ವರ್​ ವಿರುದ್ಧ ಸುಧಾಕರ್​ ಸೋತಿದ್ದರು. ಬಳಿಕ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಪ್ರದೀಪ್​ ಈಶ್ವರ್​ ರಾಜೀನಾಮೆಗೆ ಒತ್ತಾಯಗಳು ಕೇಳಿಬರುತ್ತಿವೆ.

ಚಿಕ್ಕಾಬಳ್ಳಾಪುರದಲ್ಲಿ ಸುಧಾಕರ್​ ಅವರು ಒಂದೇ ಒಂದು ಮತ ಹೆಚ್ಚಿಗೆ ಪಡೆದರು ನಾನು ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್​ ಈಶ್ವರ್​ ಚುನಾವಣೆಗೂ ಮುಂಚೆ ಹೇಳಿದ್ದರು. ಅಲ್ಲದೆ, ಸುಧಾಕರ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಸುಧಾಕರ್​ ಅವರು ಗೆಲುವು ದಾಖಲಿಸಿದ್ದು, ಪ್ರದೀಪ್​ ಈಶ್ವರ್​ ರಾಜೀನಾಮೆಗೆ ಸಾಕಷ್ಟು ಮಂದಿ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಪ್ರದೀಪ್​ ಈಶ್ವರ್​ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದೇ ಸದ್ಯ ಕತೂಹಲವಾಗಿದೆ.

ಮನೆಯ ಮೇಲೆ ಕಲ್ಲು ತೂರಾಟ

ಪ್ರದೀಪ್​ ಈಶ್ವರ್​ ರಾಜೀನಾಮೆಗೆ ಒತ್ತಾಯಗಳು ಕೇಳಿಬರುತ್ತಿರುವುದರ ನಡುವೆಯೇ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ಚಿಕ್ಕಬಳ್ಳಾಪುರದ ಕಂದವಾರದಲ್ಲಿರುವ ಪ್ರದೀಪ್ ಈಶ್ವರ್ ಮನೆ ಮೇಲೆ ಕಿಡಿಗೆಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರ ಪರಿಣಾಮ ಮನೆಯ ಕಿಟಕಿ, ಗಾಜು ಪುಡಿ ಪುಡಿಯಾಗಿದೆ. ಸುಧಾಕರ್ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಲ್ಲು ತೂರಾಟ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ.

ಘಟನೆಯ ಬೆನ್ನಲ್ಲೇ ಚಿಕ್ಕಬಳ್ಳಾಪುರ ನಗರ ಪೊಲೀಸರು ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರದೀಪ್​ ಈಶ್ವರ್​ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net