

ಸೊರಬ: ತಾಲೂಕಿನ ಹರೂರು ಗ್ರಾಮದ ಬಸವಣ್ಣನ ದೇವಾಲಯದ ಬಳಿ ಒಟ್ಟು 14 ಸಾಲುಗಳನ್ನು ಹೊಂದಿರುವ ಕ್ರಿ.ಶ. 1456ನೇ ಅವಧಿಯ ಶಿಲಾ ಶಾಸನ ಪತ್ತೆಯಾಗಿದೆ.
ಶ್ರೀ ಮಲ್ಲಿಕಾರ್ಜುನ ನಾಯಕ ವಿಜಯನಗರ ಸಾಮ್ರಾಜ್ಯ ಆಳುತ್ತಿರುವಾಗ ಆರಗದ ದೇವಪ್ಪ ನಾಯಕ ಚಂದ್ರಗುತ್ತಿ ಕಂಪಣವನ್ನು ಪ್ರತಿ ಪಾಲಿಸುತ್ತಿದ್ದರು. ಕ್ರಿ.ಶ. 1456ರ ವೈಶಾಖ ಮಾಸದ ಬುಧವಾರ ಭೈರವ ಗೌಡನ ತಮ್ಮ ಭೈರಗೌಡನ ಮಗಳು ಸಣ್ಣಕ್ಕ ಸ್ವರ್ಗಸ್ಥಳಾಗುತ್ತಾಳೆ. ಅವಳ ಮುಕ್ತಿಗೆ ಹಾಗೂ ಇವರ ಭಕ್ತಿಗೆ ಹರೂರುರಿನ ಕಲಿನಾಥ ದೇವರಿಗೆ ಬಸವಣ್ಣ (ನಂದಿ)ನನ್ನು ಪ್ರತಿಷ್ಠಾಪಿಸುತ್ತಾರೆ. ಭೈರವ ಗೌಡ ಬಹುಶಃ ಹರೂರಿನವರಾಗಿದ್ದು ಸತ್ತವರು ಮೋಕ್ಷ ಹೊಂದಲಿ ಎಂದು ನಂದಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇದೇ ಅವಧಿಯಲ್ಲಿ ಮದುವೆಗೂ ಮುಂಚೆ ಮದುಮಕ್ಕಳು ಮಡಿದಾಗ ಅವರಿಗೆ ಮೋಕ್ಷ ಸಿಗಲೆಂದು ಹೋರಿಕರುಗಳ ಮದುವೆ ಮಾಡಿಸಿದ ಉಲ್ಲೇಖ ಶಿಕಾರಿಪುರ ತಾಲೂಕಿನ ಬೋಗಿ ಗ್ರಾಮದ ಬಳಿಯ ಶಾಸನದಲ್ಲಿದೆ ಎಂದು ಇತಿಹಾಸ ಅಧ್ಯಯನಕಾರ ರಮೇಶ್ ಬಿ. ಹಿರೇಜಂಬೂರು ತಿಳಿಸಿದ್ದಾರೆ/
ದೇವಾಲಯದಲ್ಲಿ ಎರಡು ನಂದಿ ಶಿಲ್ಪಗಳಿವೆ. ಇತ್ತೀಚಿಗೆ ದೇವಾಲಯದ ಒಳಗಿದ್ದ ನಂದಿ ಶಿಲ್ಪವನ್ನು ಹೊಸದಾಗಿ ಮಾಡಿಸಲಾಗಿದೆ. ಗಾತ್ರದಲ್ಲಿ ಚಿಕ್ಕದಿರುವ ಇನ್ನೊಂದು ನಂದಿ ವಿಗ್ರಹವು ದೇವಾಲಯದ ಹೊರಗೆ ದೇವರಿಗೆ ಅಭಿಮುಖವಾಗಿ ಇಡಲಾಗಿದೆ. ಇದೇ ನಂದಿ ಶಿಲ್ಪ ಸಣ್ಣಕ್ಕನ ಸ್ಮರಣಾರ್ಥ ಮಾಡಿಸಿರಬಹುದು ಎಂದು ಅಂದಾಜಿಸಲಾಗಿದೆ.
ಚಂದ್ರಗುತ್ತಿ ಕಂಪಣವು ವಿಜಯನಗರ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿರುವುದು ಮತ್ತೊಮ್ಮೆ ದೃಢವಾಗಿದೆ. ಕ್ರಿ.ಶ. 1456ರಲ್ಲಿ ಚಂದ್ರಗುತ್ತಿ (ಗುತ್ತಿ) ಕಂಪಣವನ್ನು ದೇವಪ್ಪ ಡಣಾಯಕರು ಆಳುತ್ತಿದ್ದು ಆರಗ ಕಂಪಣವನ್ನು ಸಿರಿಯಮ್ಮ ಹೆಗ್ಗಡೆ ನೋಡಿಕೊಳ್ಳುತ್ತಿದ್ದರು. ಕ್ರಿ.ಶ. 1511ರ ನಂತರ ಆರಗ ಕಂಪಣವನ್ನು ದೇವಪ್ಪ ನಾಯಕರು ಪಾಲಿಸಿದ್ದಾರೆ. ಇದು ಐದು ನೂರು ವರ್ಷಗಳ ಹಿಂದಿನ ಸ್ಥಳೀಯ ಸಾಂಸ್ಕೃತಿಕ ಜೀವನದ ಮಹತ್ವ ತಿಳಿಸುತ್ತದೆ.
ಶಾಸನ ಅಧ್ಯಯನಕ್ಕೆ ಡಾ. ಜಗದೀಶ ಅಗಸಿಬಾಗಿಲು, ಡಾ. ಶೇಜೇಶ್ವರ್ ನಾಯಕ್, ಶ್ರೀಪಾದ ಬಿಚ್ಚುಗತ್ತಿ ಮತ್ತು ಮಂಜಪ್ಪ ಚುರ್ಚಿಗುಂಡಿ ಮಾರ್ಗದರ್ಶನ ನೀಡಿದ್ದಾರೆ. ಶಾಸನ ಶೋಧನೆಗೆ ಸ್ಥಳೀಯರಾದ ಜಗದೀಶ, ಶರಣಪ್ಪ, ಗ್ರಾಮ ಸಮಿತಿ ಅಧ್ಯಕ್ಷ ಓಂಕಾರ್, ಗುರುಮೂರ್ತಿ ಸಹಕಾರ ನೀಡಿದ್ದಾರೆ.