

ಬೆಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಬಂದಿದ್ದ ಜಾಹೀರಾತು ನಂಬಿ ಸ್ಟಾಕ್ ಮಾರ್ಕೆಟ್‌ನಲ್ಲಿ 2.57 ಕೋಟಿ ರೂ. ಹೂಡಿಕೆ ಮಾಡಿದ್ದ ನಿವೃತ್ತ ಅಧಿಕಾರಿಗೆ ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ.
ಅಸ್ಟಿನ್‌ಟೌನ್‌ನ 61 ವರ್ಷದ ನಿವೃತ್ತ ಅಧಿಕಾರಿ ಮೋಸಕ್ಕೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಬಂದಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನಿವೃತ್ತ ಅಧಿಕಾರಿ ಮೊಬೈಲ್‌ಗೆ ನಂಬರ್ ಅನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದರು. ವಿಐಪಿ ಗ್ರೂಪ್- 26ನಲ್ಲಿ ಸ್ಟಾಕ್ ಮಾರ್ಕೆಟ್ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಇದನ್ನು ಗಮನಿಸಿ ಹೂಡಿಕೆ ಬಗ್ಗೆ ನಿವೃತ್ತ ಅಧಿಕಾರಿ ಆಸಕ್ತಿ ತೋರಿಸಿದಾಗ, ಗೋಲ್ಡ್ ಮ್ಯಾನ್ ಸ್ಯಾಚ್ ಕಸ್ಟಮರ್ ಸರ್ವಿಸ್ ಎಂಬ ಅಕೌಂಟ್ ತೆರೆಯಬೇಕೆಂದು ಮತ್ತೊಂದು ಲಿಂಕ್ ಕಳುಹಿಸಿದ್ದರು. ಅದರ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ಶೇರ್ ಮಾಡಿದ್ದರು.
ಇದಾದ ಮೇಲೆ ಅಪರಿಚಿತ ವ್ಯಕ್ತಿ, ದೂರುದಾರರಿಗೆ ಕರೆ ಮಾಡಿ ದೊಡ್ಡ ಕಂಪನಿಯ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು 54 ಬಗೆಯ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಲು ಸಲಹೆ ಕೊಟ್ಟಿದ್ದ. ಇದನ್ನು ನಂಬಿದ ಅಧಿಕಾರಿ ಮಾ. 27ರಿಂದ ಮೇ 29ರ ನಡುವೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 2.57 ಕೋಟಿ ರೂ. ಹೂಡಿಕೆ ಮಾಡಿದ್ದರು. ಸ್ವಲ್ಪ ದಿನಗಳ ಬಳಿಕ ಹೂಡಿಕೆ ಮೇಲಿನ ಲಾಭಾಂಶವನ್ನು ಹಿಂಪಡೆಯಲು ಮುಂದಾದಾಗ ಸಾಧ್ಯವಾಗಿಲ್ಲ.
ತನಗೆ ಕರೆ ಮಾಡಿ ಹೂಡಿಕೆಗೆ ಸಲಹೆ ಕೊಟ್ಟಿದ್ದ ವ್ಯಕ್ತಿಗಳಿಗೆ ಕರೆ ಮಾಡಿದಾಗ ಸಂಪರ್ಕ ಲಭ್ಯವಾಗಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ನಿವೃತ್ತ ಅಧಿಕಾರಿ, ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.