

ಮುಂಬೈ: ಇಸ್ರೇಲ್-ಇರಾನ್ ಸಂಘರ್ಷದಿಂದ ಜಾಗತಿಕ ಅನಿಶ್ಚಿತತೆ ಹೆಚ್ಚಿರುವ ಕಾರಣದಿಂದ ಸತತ ಮೂರನೇ ದಿನವೂ ಭಾರತೀಯ ಷೇರುಪೇಟೆ ಇಳಿಕೆ ಕಂಡಿತು. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ ಗುರುವಾರ 83 ಅಂಶ ಇಳಿಕೆಯಾಗಿ, 81,362ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ಬುಧವಾರ 138 ಇಳಿಕೆ ಕಂಡು 81,444ಕ್ಕೆ ಸೀಮಿತಗೊಂಡಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 18 ಅಂಶ ಕುಸಿತಗೊಂಡು, 24,793ಕ್ಕೆ ತಲುಪಿದೆ. ಬಿಎಸ್ಇ ಮಿಡ್ಕ್ಯಾಪ್ 749 ಅಂಶ ಕುಸಿದು, 44,941ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ಬಿಎಸ್ಇ ಸ್ಮಾಲ್ಕ್ಯಾಪ್ 940 ಅಂಶಗಳಷ್ಟು ಇಳಿಕೆಯಾಗಿ, 52,094ಕ್ಕೆ ತಲುಪಿತು. ಸೆನ್ಸೆಕ್ಸ್ನ 30 ಷೇರುಗಳ ಗುಚ್ಛದಲ್ಲಿ 22 ನಷ್ಟ ಅನುಭವಿಸಿದರೆ, 8 ಲಾಭ ಕಂಡವು. ನಿಫ್ಟಿಯ 50 ಷೇರುಗಳಲ್ಲಿ 33 ನಷ್ಟ, 17 ಲಾಭ ಕಂಡವು. ಅದಾನಿ ಪೋರ್ಟ್ಸ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ ಷೇರುಗಳು ಸರಾಸರಿ ಶೇ.2.50ರಷ್ಟು ಇಳಿಕೆ ಕಂಡವು.
ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಇನ್ನೂ ತಣಿದಿಲ್ಲ. ಹೀಗಾಗಿ, ದೇಶದ ಷೇರು ಸೂಚ್ಯಂಕಗಳು ಇಳಿಕೆ ಕಂಡವು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.