

ಶಿಡ್ಲಘಟ್ಟ : ನರೇಗಾ ಕಾಮಗಾರಿಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಅನೇಕ ಬದಲಾವಣೆಗಳನ್ನು ತಂದು ರಿಯಾಯಿತಿ ಘೋಷಿಸಲಾಗಿದೆ. ಪ್ರತಿದಿನಕ್ಕೆ 370 ರೂ.ಗಳನ್ನು ನೀಡಲಾಗುವುದು ಎಂದು ತಾಲೂಕು ಪಂಚಾಯಿತಿ ಮನರೇಗಾ ಸಂಯೋಜಕ ಲೊಕೇಶ್ ತಿಳಿಸಿದರು.
ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕತೇಕಹಳ್ಳಿ ಗ್ರಾಮದ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಳಪ್ಪನಕುಂಟೆಯಿಂದ ದಿಗವಕುಂಟೆಯವರೆಗೂ ಕಾಲುವೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದುಡಿಯೋಣ ಬಾ ಅಭಿಯಾನದಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ನರೇಗಾದಡಿ ನಡೆಸುತ್ತಿರುವ ಕಾಮಗಾರಿಗಳ ಸ್ಥಳದಲ್ಲೇ ದುಡಿಯೋಣ ಬಾ ಅಭಿಯಾನವನ್ನು ನಡೆಸಿ ನರೇಗಾ ಕಾಮಗಾರಿಗಳಲ್ಲಿ ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಳ ಮಾಡುವುದು, ಹಿರಿಯರಿಗೆ, ವಿಶೇಷ ಚೇತನರಿಗೆ ಮತ್ತು ಗರ್ಭಿಣಿಯರು ಕೆಲಸದಲ್ಲಿ ರಿಯಾಯ್ತಿ ನೀಡುವ ಬಗ್ಗೆ ಹಾಗೂ ಪ್ರತಿದಿನ ಕೆಲಸಕ್ಕೆ 370 ರೂ.ಗಳನ್ನು ನೀಡುವ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಬ್ಬ ಅರ್ಹ ಫಲಾನುಭವಿಯು ವೈಯುಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಯಿತು.
ನರೇಗಾ ಯೋಜನೆಯ ಒಂದು ಜಾಬ್ ಕಾರ್ಡ್‌ಗೆ ಸರಿ ಸುಮಾರು 5 ಲಕ್ಷದ ವರೆಗೂ ಕಾಮಗಾರಿಗಳನ್ನು ಸದುಪಯೋಗ ಪಡೆದುಕೊಳ್ಳಬಹುದು ಹಾಗೂ ನರೇಗಾ ಏಕೀಕೃತ ಸಹಾಯವಾಣಿ 8277506000 ಸಂಖ್ಯೆಗೆ ಕರೆ ಮಾಡಿ ವಿವರಗಳನ್ನು ಪಡೆಯಬಹುದು ಎಂದು ವಿವರಿಸಿದರು.
ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ವಜ್ರೇಶ್ ಕುಮಾರ್, ಡಿಇಒ ಸುಧಾಕರ್, ಬಿಎಫ್‌ಟಿ ಮುನೇಶ್, ಜಿಕೆಎಂ ಲಕ್ಷ್ಮಿನರಸಮ್ಮ, ಕೂಲಿ ಕಾರ್ಮಿಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಹ ಹಾಜರಿದ್ದರು.