ಬೊಜ್ಜು ಇಳಿಸುವ ಔಷಧ ಕರೊನಾವನ್ನು ಕರಗಿಸುತ್ತೆ...!

statin2
Published on

ನವದೆಹಲಿ: ಸದ್ಯ ಕರೊನಾ ನಿಗ್ರಹಕ್ಕೆ ಔಷಧ ಸಿದ್ಧವಾಗಿಲ್ಲ. ಈಗಿರುವ ಔಷಧಗಳಲ್ಲಿ ಯಾವುದು ಪರಿಣಾಮಕಾರಿ ಎಂಬುದನ್ನು ಪತ್ತೆ ಹಚ್ಚಿ ಬಳಸಲಾಗುತ್ತಿದೆ. ಅಂತೆಯೇ ಹಲವು ಔಷಧಗಳು ಪರಿಣಾಮಕಾರಿಯಾಗಿವೆ ಎಂಬುದು ಸಾಬೀತಾಗಿದೆ. ದೇಹದಲ್ಲಿ ಕೊಬ್ಬು ಕರಗಿಸುವ (ಕೊಲೆಸ್ಟ್ರಾಲ್​) ಔಷಧ ಕೂಡ ಕರೊನಾದಿಂದಾಗಿ ಗಂಭೀರ ಅನಾರೋಗ್ಯಕ್ಕೆ ತುತ್ತಾದವರಿಗೆ ಸಂಜೀವಿನಿ ಎಂದು ಅಧ್ಯಯನವೊಂದು ಹೇಳಿದೆ.

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರು ಡೆಕ್ಸಾಮೆಥಾಸೋನ್​ ಔಷಧ ವೆಂಟಿಲೇಟರ್​ನಲ್ಲಿರುವ ಕರೊನಾ ರೋಗಿಗಳ ಪ್ರಾಣ ಉಳಿಸಬಲ್ಲುದು ಎಂದು ತಿಳಿಸಿದ ಬೆನ್ನಲ್ಲೇ ಈ ಅಧ್ಯಯನ ವರದಿ ಬಹಿರಂಗಗೊಂಡಿದೆ.

ಯಕೃತ್ತಿನಲ್ಲಿ ಕೊಲೆಸ್ಟ್ರಾಲ್​ ಕಡಿಮೆ ಮಾಡುವ ಔಷಧಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಶ್ವಾಸಕೋಶಕ್ಕೆ ಉಂಟಾದ ಹಾನಿಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಈ ಔಷಧವನ್ನು ಮಾತ್ರ ನೀಡಿದರೆ ಇಂಥ ಫಲಿತಾಂಶ ಕಂಡು ಬಂದಿದೆಯೇ ಅಥವಾ ಇತರ ಔಷಧಗಳೊಂದಿಗೆ ಸಂಯುಕ್ತವಾಗಿ ಪ್ರಯೋಗಿಸಿದಾಗ ಸಾಧ್ಯವಾಗುತ್ತದೆಯೇ ಎಂಬುದು ಖಚಿತವಾಗಿಲ್ಲ ಎಂದು ಸೆಲ್​ ಮೆಟಾಬೋಲಿಸಂ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.

ಚೀನಾದ ವುಹಾನ್​ ವಿಶ್ವವಿದ್ಯಾಲಯದ ರೆನ್​ಮಿನ್​ ಆಸ್ಪತ್ರೆಯಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಹುಬೈ ಪ್ರಾಂತ್ಯದ 21 ಆಸ್ಪತ್ರೆಗಳಲ್ಲಿದ್ದ 13,981 ರೋಗಿಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ 1,29 ಜನರಿಗೆ ಬೊಜ್ಜು ನಿವಾರಕ ಔಷಧ ನೀಡಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಔಷಧ ಪಡೆದವರಲ್ಲಿ ಮರಣದ ಪ್ರಮಾಣ ಶೇಕಡ 5.2 ಆಗಿದ್ದರೆ, ಉಳಿದವರಲ್ಲಿ ಶೇಕಡ 9.4 ಆಗಿತ್ತು. 28 ದಿನಗಳ ಫಾಲೋಅಪ್​ ಬಳಿಕ ಈ ಅಂಶಗಳು ಕಂಡು ಬಂದಿವೆ ಎಂದು ಮುಖ್ಯ ಸಂಶೋಧಕ ಲೀ ಹಾಂಗ್​ಲಿಯಾಂಗ್​ ಹೇಳಿದ್ದಾರೆ.

ಕೋವಿಡ್​ ರೋಗಿಗಳು ತೀವ್ರ ಅನಾರೋಗ್ಯಕ್ಕೆ ತೆರಳುವುದನ್ನು ಕೂಡ ಈ ಔಷಧಗಳು ತಡೆಯುತ್ತವೆ ಎಂದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net