

ನವದೆಹಲಿ: ಕಳೆದ 40 ವರ್ಷಗಳಲ್ಲೇ ಅತ್ಯಂತ ಮಾರಕ ಎಂದು ಪರಿಗಣಿಸಲಾಗಿದ್ದ ಸಾಂಕ್ರಾಮಿಕ ಕಾಯಿಲೆಯನ್ನು ತೊಲಗಿಸುವಲ್ಲಿ ಕೊನೆಗೂ ಈ ದೇಶ ಯಶಸ್ವಿಯಾಗಿದೆ. ಎರಡು ವರ್ಷಗಳಿಂದ ನಡೆಸಿದ್ದ ಹೋರಾಟಕ್ಕೆ ಯಶಸ್ಸು ಸಿಕ್ಕಂತಾಗಿದೆ.
ಹೌದು.... ಪಶ್ಚಿಮ ಆಫ್ರಿಕಾ ರಾಷ್ಟ್ರಗಳನ್ನು ಇನ್ನಿಲ್ಲದಂತೆ ಕಾಡಿದ, ಸಾವಿರಾರು ಜನರನ್ನು ಬಲಿ ಪಡೆದ ಎಬೊಲಾ ಕಾಯಿಲೆ ತನ್ನ ದೇಶದಲ್ಲಿ ಇನ್ನಿಲ್ಲವೆಂದು ಪ್ರಜಾಪ್ರಭುತ್ವ ರಾಷ್ಟ್ರ ಕಾಂಗೋ ಘೋಷಿಸಿದೆ. ಕಳೆದ ಎಪ್ರಿಲ್ನಲ್ಲಿಯೇ ಇದನ್ನು ಘೋಷಿಸಬೇಕಿತ್ತು. ಅದಕ್ಕೆ ಮೂರು ದಿನಗಳಿರುವಂತೆ ಮತ್ತೊಂದು ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ 42 ದಿನಗಳ ನಿರೀಕ್ಷಣಾ ಅವಧಿಯನ್ನು ಪೂರೈಸಿ ಇದೀಗ ಘೋಷಣೆ ಮಾಡಲಾಗಿದೆ. ಸದ್ಯ ಕಾಂಗೋದ ಉತ್ತರ ಭಾಗವನ್ನು ಸಂಪೂರ್ಣ ಎಬೊಲಾ ಮುಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. ಉತ್ತರ ಭಾಗದಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದರಿಂದ ಕೆಲ ದಿನಗಳ ಬಳಿಕ ಘೋಷಣೆ ಮಾಡಲಿದೆ.
ಎಬೋಲಾದಿಂದ ಕಾಂಗೋವೊಂದರಲ್ಲಿ 2,280 ಜನರು ಮೃತಪಟ್ಟಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಆಫ್ರಿಕಾ ಖಂಡದ ವಿವಿಧ ರಾಷ್ಟ್ರಗಳಲ್ಲಿ 28 ಸಾವಿರಕ್ಕೂ ಅಧಿಕ ಜನರು ಎಬೊಲಾ ಪೀಡಿತರಾಗಿದ್ದರೆ, ಅವರಲ್ಲಿ 11,300 ಜನರು ಮೃತಪಟ್ಟಿದ್ದರು. ಅಷ್ಟೊಂದು ಮಾರಕವಾಗಿತ್ತು ಈ ರೋಗ. ಹಲವು ನಿಯಂತ್ರಣ ಕ್ರಮಗಳ ಬಳಿಕ ಇದನ್ನು ಹತೋಟಿಗೆ ತರಲಾಯಿತಾದರೂ, ಅಂತಿಮವಾಗಿ ಲಸಿಕೆ ಮೂಲಕವೇ ಇದನ್ನು ತಡೆಗಟ್ಟಲಾಗಿದೆ.
ಹಲವು ವರ್ಷಗಳ ಪರಿಶ್ರಮ: ಎಬೊಲಾ 2013ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. 2014ರಲ್ಲಿ ಇದನ್ನು ಸಾಂಕ್ರಾಮಿಕ ಕಾಯಿಲೆ ಎಂದು ವಿಶ್ವ ಸಂಸ್ಥೆ ಘೋಷಿಸಿತು. ಪಶ್ಚಿಮ ಆಫ್ರಿಕಾದ 60 ಕಡೆಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು.
ಕಾಂಗೋದಲ್ಲಿ 2018ರಲ್ಲಿ ಆರಂಭವಾದ ಎಬೊಲಾ ವ್ಯಾಪಕವಾಗಿ ಹಬ್ಬಲು ಆರಂಭವಾಯಿತು. ಇದರ ನಿಯಂತ್ರಣಕ್ಕಾಗಿ ಪ್ರತ್ಯೇಕ ಯೋಜನೆಯನ್ನೇ ಆರಂಭಿಸಲಾಯಿತು. ಎರಡು ವರ್ಷಗಳ ಸತತ ಪರಿಶ್ರಮದ ಫಲವಾಗಿ ಇದನ್ನು ತಡೆಗಟ್ಟಲಾಗಿದೆ ಎಂದು ಕಾಂಗೋ ಹೇಳಿದೆ.
ಆದರೆ, ಕರೊನಾ ಮಹಾಮಾರಿಯ ಅಟ್ಟಹಾಸದ ನಡುವೆ, ಈ ಸುದ್ದಿ ಗೌಣವಾಗಿದೆ. ಆದರೆ, ಕರೊನಾ ವಿರುದ್ಧವೂ ಜಯಿಸುವ ವಿಶ್ವಾಸವನ್ನು ಇದು ಮೂಡಿಸಲಿದೆ ಎಂದೇ ವಿಶ್ಲೇಷಿಸಲಾಗಿದೆ.