

ನವದೆಹಲಿ: ಇಡೀ ಜಗತ್ತನ್ನೇ ಇನ್ನಿಲ್ಲದಂತೆ ಕಾಡುತ್ತಿರುವ ಕರೊನಾ ವೈರಸ್ಸದ್ಯಕ್ಕಂತೂ ತೊಲಗುವ ಲಕ್ಷಣಗಳನ್ನು ತೋರಿಸುತ್ತಿಲ್ಲ. ಆದರೆ, ಜನರನ್ನು ಇನ್ನಷ್ಟು ಭೀತಿಗೊಳಪಡಿಸುವ ವಿಷಯಗಳೇ ಕರೊನಾ ಬಗ್ಗೆ ಹೊರಬೀಳುತ್ತಿವೆ.
ಚೀನಾದ ಸಾಂಕ್ರಾಮಿಕ ರೋಗ ತಜ್ಞರಾದ ಪ್ರೊ. ಲೀ ಲಂಜುವಾನ್ ಆತಂಕಕಾರಿ ವಿಷಯವೊಂದನ್ನು ಹೊರ ಹಾಕಿದ್ದಾರೆ. ಕರೊನಾ ನಿಗದಿತ ತಾಪಮಾನದಲ್ಲಿ 20 ವರ್ಷಗಳವರೆಗೆ ಬದುಕಿರಬಲ್ಲುದು ಎಂದು ಹೇಳಿದ್ದಾರೆ. ಜತೆಗೆ, ಹಸಿ ಮಾಂಸ ಹಾಗೂ ಮೀನನ್ನು ಮುಟ್ಟಲೇ ಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕರೊನಾ ವೈರಸ್ ಮೇಲೆ ತಂಪು ಯಾವುದೇ ಪರಿಣಾಮ ಬೀರುವುದಿಲ್ಲ. ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ತಿಂಗಳುಗಟ್ಟಲೇ ಈ ವೈರಸ್ ಜೀವಂತವಾಗಿರುತ್ತೆ. ಜತೆಗೆ, ಮೈನಸ್ 20 ತಾಪಮಾನದಲ್ಲಿ 20 ವರ್ಷಗಳವರೆಗೆ ಬದುಕಿರುತ್ತೆ ಎಂಬುದನ್ನು ಕಂಡು ಹಿಡಿದಿದ್ದಾರೆ.
ಕಡಲು ತಿನಿಸು (ಸೀ ಫುಡ್) ಗಳಲ್ಲಿ ಹಲವು ಬಾರಿ ಕಂಡು ಬಂದಿರುವುದಕ್ಕೆ ಇದೇ ಕಾರಣ ಎಂದು ಹೇಳಲಾಗಿದೆ. ಹೀಗಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಸಾಲ್ಮನ್ ಹಾಗೂ ಇತರ ಮಾಂಸವನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಿ ಎಂದು ತಜ್ಞರು ಹೇಳಿದ್ದಾರೆ.
ಮಾರುಕಟ್ಟೆ ಹಾಗೂ ಸೋಂಕು ಹರಡುವ ಸಂಭಾವ್ಯತೆ ಹೆಚ್ಚಿರುವ ಇತರ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಫೇಸ್ ಶೀಲ್ಡ್ (ಮುಖಗವಸು) ಧರಿಸಿರಬೇಕೆಂದು ಸೂಚಿಸಲಾಗಿದೆ.
ಮಾರುಕಟ್ಟೆ ಹಾಗೂ ಮಾಂಸ ಮಾರಾಟ ಕೇಂದ್ರಗಳಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಕರೊನಾ ವೈರಸ್ ಕುರುಹುಗಳು ಹಿಂದಿನ ವೈರಸ್ ಜತೆ ಸಾಮ್ಯತೆ ಹೊಂದಿವೆ. ಕರೊನಾ ಒಂದೇ ಜಾಗದಲ್ಲಿ ಬಹುಕಾಲ ಬದುಕುಳಿದಿರುವುದಕ್ಕೆ ಇದು ಪುಷ್ಠಿ ನೀಡುತ್ತಿದೆ ವಿಶ್ಲೇಷಿಸಲಾಗಿದೆ.
ಆದರೆ ಮೀನು, ಮಾಂಸ ತಿನ್ನುವುದರಿಂದ ಜನರು ಕೋವಿಡ್ಗೆ ಗುರಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವರ್ತಕರು ಹೇಳಿದ್ದಾರೆ.