ನಿಮ್ಮ ಡಿಕೆ ಸಿಎಂ ಆಗಿ ಆಯಿತು... ಡಿಕೆ ಡಿಕೆ ಕೂಗುವುದು ನಿಲ್ಲಿಸಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Published on
ಬೆಂಗಳೂರು: ನಿಮ್ಮ ಡಿಕೆ ಮುಖ್ಯಮಂತ್ರಿ ಆಗಿ ಆಯಿತು. ಡಿಕೆ.. ಡಿಕೆ... ಕೂಗುವುದು ಬಿಡಿ ಸಾಕು ಎಂದು ಹಾಸ್ಯ ಮಾಡುತ್ತಲೇ ಮಾತು ಶುರು ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಂದಿನ ಐದಾರು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಎಲ್ಲರೂ ಸಿದ್ಧರಾಗಬೇಕೆಂದು ಕರೆ ನೀಡಿದ್ದಾರೆ.
ಬುಧವಾರ ಡಿ.ಕೆ. ಶಿವಕುಮಾರ್, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದರು. ಅಲ್ಲಿಂದ ನೇರವಾಗಿ ರಾತ್ರಿ 8.45ಕ್ಕೆ ಕ್ವೀನ್ಸ್ ರಸ್ತೆಯಲ್ಲಿ ಇರುವ ಕೆಪಿಸಿಸಿ ಕಚೇರಿಗೆ ಬಂದು ತನಗಾಗಿ ಕಾದು ಕುಳಿತಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಆಗಸ್ಟ್ 31ರ ಒಳಗಾಗಿ ಜಿಬಿಎಯ ಪಾಲಿಕೆಗಳ ಚುನಾವಣೆ ಮುಗಿಯಲಿದೆ. ಜತೆಗೆ ರಾಜ್ಯಸಭೆ, ವಿಧಾನ ಪರಿಷತ್ತು ಮತ್ತು ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಗಳು ಮಾಡಲಾಗುತ್ತದೆ. ಇದಕ್ಕಾಗಿ ಟಿಕೆಟ್ ಆಕಾಂಕ್ಷಿಗಳು ಮನೆ ಮನೆಗೆ ಹೋಗಿ ಸಂಘಟನೆ ಮಾಡಬೇಕು. ಶಾಸಕರ ಮತ್ತು ಸಚಿವ ಹಿಂದೆ ತಿರುಗಾಡಿದರೇ ಟಿಕೆಟ್ ಸಿಗುವುದಿಲ್ಲ. ನಿಜವಾದ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರಲು ನಿರ್ಧಾರ ಮಾಡಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಶುರುವಾಗಿದೆ. ಎಸ್‌ಐಆರ್‌ನಿಂದ ಲಾಭವೂ ಇದೆ ಮತ್ತು ನಷ್ಟವೂ ಇದೆ. ಎಚ್ಚರಿಕೆಯಿಂದ ನಿಭಾಯಿಸಬೇಕು. ಶೇ.80 ಮ್ಯಾಪಿಂಗ್ ಮಾಡಲಾಗಿದೆ ಎನ್ನುವುದು ಶುದ್ಧ ಸುಳ್ಳು. ಬಿಎಲ್‌ಒಗಳು ಮನೆ ಮನೆಗೆ ಬಂದು ಅರ್ಜಿ ಕೊಟ್ಟಾಗ ಸೂಕ್ತ ದಾಖಲೆ ಸಮೇತ ಸಹಿ ಮಾಡಿಕೊಟ್ಟರೇ ಮಾತ್ರ ಮತಪತ್ರದಲ್ಲಿ ಹೆಸರು ಉಳಿಯಲಿದೆ. ಇಲ್ಲವಾದರೆ, ಮತದಾನದ ಹಕ್ಕು ಇರುವುದಿಲ್ಲ. ಪರಿಣಾಮ ಪಂಚ ಗ್ಯಾರಂಟಿ ಯೋಜನೆ ಸವಲತ್ತು ಸಿಗುವುದಿಲ್ಲ. ಇದಕ್ಕಾಗಿ ಪ್ರತಿಯೊಬ್ಬ ಶಾಸಕ ಮತ್ತು ಸಚಿವರಿಗೆ ಜವಾಬ್ದಾರಿ ನೀಡಲಾಗುತ್ತದೆ. ಜತೆಗೆ ಕಾರ್ಯಕರ್ತರು ದುಡಿಯಬೇಕೆಂದು ಸೂಚನೆ ನೀಡಿದರು.
ಮುಖ್ಯಮಂತ್ರಿಯಾದ ಕೂಡಲೇ ಈ ಪಕ್ಷದ ಕಚೇರಿ ಬಿಡುವ ಗಿರಾಕಿ ನಾನಲ್ಲ. ನೀವೇ ನನ್ನ ಉಸಿರು, ನಿಮ್ಮೊಂದಿಗೆ ಇರುತ್ತೇನೆ. ವಿದ್ಯಾರ್ಥಿ ಜೀವನದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡಿದವನು ನಾನು. ಎಲ್ಲ ಕಾರ್ಯಕರ್ತರಿಂದ ಈ ಅವಕಾಶ ಸಿಕ್ಕಿದೆ. ಈ ನಾಡಿನ ಜನರಿಗಾಗಿ ಮತ್ತು ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹೈಕಮಾಂಡ್ ಸೂಚನೆಯಂತೆ ಸರಳ ಸಮಾರಂಭ
ನಿರ್ಗಮಿತ ಸಿಎಂ ಸಿದ್ದರಾಮಯ್ಯ ಮತ್ತು ನಾನು ವಿಧಾನಸೌಧ ಮುಂಭಾಗ ಅಥವಾ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಮಾಡಬೇಕೆಂಬ ನಿರ್ಧಾರ ಮಾಡಿದ್ದೇವು. ಕನಕಪುರದಿಂದ 1,700 ಬಸ್‌ಗಳನ್ನು ನಮ್ಮ ಮುಖಂಡರು ಬುಕ್ ಮಾಡಿದ್ದರು. ಇದೇ ರೀತಿ ರಾಜ್ಯದ ಎಲ್ಲೆಡೆಯಿಂದ ಜನರನ್ನು ಕರೆತರಲು ನಿರ್ಧಾರ ಮಾಡಿದ್ದರು. ಈ ವಿಷಯ ಹೈಕಮಾಂಡ್ ರಾಹುಲ್ ಗಾಂಧಿಗೆ ಗೊತ್ತಾಗಿ, ಸರಳವಾಗಿ ಸಮಾರಂಭ ಮಾಡುವಂತೆ ಸಲಹೆ ನೀಡಿದರು. ಕೊನೆಗೆ ಲೋಕಭವನಕ್ಕೆ ಶ್‌ಟಿ ಮಾಡಲಾಯಿತು ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.

ಕಾಂಗ್ರೆಸ್ ಸಿಪಾಯಿಗೆ ಅಧಿಕಾರ

ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಸಿಪಾಯಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಿದೆ. ಇಂದು ಕಾರ್ಯಕರ್ತನಿಗೆ ಸಿಕ್ಕಿರುವ ಗೌರವ ಎಂದು ಪಕ್ಷದ ಕಚೇರಿಯಲ್ಲಿ ಸಂಭ್ರಮಿಸಿದರು. ಎನ್‌ಎಸ್‌ಯುನಲ್ಲಿ ಡಿ.ಕೆ.ಶಿವಕುಮಾರ್ ಜತೆಗೆ ಕೆಲಸ ಮಾಡಿದವರಲ್ಲಿ ಕೆಲವರು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕರ್ತ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದಾರೆ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಗೌರವ ಲಭಿಸಿದ್ದು, ಸಂಘಟನೆಗೆ ಬಲ ಸಿಕ್ಕಿದೆ ಎಂದರು. ನೆನ್ನೆ ಮೊನ್ನೆ ಪಕ್ಷಕ್ಕೆ ಬಂದವರು ಅಧಿಕಾರ ಅನುಭವಿಸಿದರು. ಇಂದು ನಿಜವಾದ ಕಾರ್ಯಕರ್ತನಿಗೆ ಸ್ಥಾನಮಾನ ಲಭಿಸಿದೆ ಎಂದು ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಿಸುತ್ತಿದ್ದ ದೃಶ್ಯಕಂಡುಬಂತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net