ಸ್ವಯಂ ಪರಿವರ್ತನೆ ಆಗದೆ ಇತರರನ್ನು ಬದಲಾಯಿಸಲು ಸಾಧ್ಯವಿಲ್ಲ

10th State level Conference
10th State level Conference
Published on

ಪ್ರಮುಖ ಮುಖ್ಯಾಂಶಗಳು

  • - ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ
  • - ‘ದೇಶಕ್ಕಾಗಿ ಪರಿವರ್ತನೆ’ ರಾಜ್ಯಮಟ್ಟದ ಸಂವಾದ ಗೋಷ್ಠಿ

ಬೆಂಗಳೂರು: ದೇಶ ಪರಿವರ್ತನೆ ಮಾಡುವುದು ಎಂದರೆ ಮೊದಲು ನಮ್ಮನ್ನು ನಾವು ಪರಿವರ್ತಿಸಿಕೊಳ್ಳುವುದು ಎಂದರ್ಥ. ನಾವು ಮೊದಲು ಪರಿವರ್ತನೆಯಾಗದ ಹೊರತು ಇತರರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ವಿಶ್ವಮಾನವ ಯುವ ವೇದಿಕೆ ನಗರದ ಪುರಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ದೇಶಕ್ಕಾಗಿ ಪರಿವರ್ತನೆ’ ರಾಜ್ಯಮಟ್ಟದ 10ನೇ ಸಂವಾದ ಗೋಷ್ಠಿ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. ಯುವಜನರು ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳಿಂದ ದೂರ ಉಳಿಯುತ್ತಿದ್ದು, ಈ ಬಗ್ಗೆ ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ದೇಶ ಆರ್ಥಿಕ, ವೈಜ್ಞಾನಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಿದ್ದರೂ, ನೈತಿಕ ಹಾಗೂ ಸಾಮಾಜಿಕವಾಗಿ ಕುಸಿಯುತ್ತಿದೆ. ಇದನ್ನು ತಡೆಯಬೇಕಾಗಿರುವ ಯುವಕರು ಜವಾಬ್ದಾರಿಯುತವಾಗಿ ನಡೆಯಬೇಕು ಎಂದರು.
ಸುಮಂಗಲಿ ಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷೆ ಡಾ. ಸುಶೀಲಮ್ಮ ಮಾತನಾಡಿ, ಬಡತನ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಉಳ್ಳವರು ಅಲ್ಪ ಪ್ರಮಾಣದಲ್ಲಿ ಕರುಣೆ ತೋರಿದರೆ ಭಾರತವನ್ನು ಬಡತನ ಮುಕ್ತ ದೇಶವಾಗಿ ಮಾಡಬಹುದು. ಮಾಗಡಿ ತಾಲೂಕಿನ ತಾಂಡಗಳಿದ್ದ ಗ್ರಾಮಗಳಿಗೆ ನಾನು ಭೇಟಿ ನೀಡಿದಾಗ ಅವರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಅವರಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಅಗತ್ಯ ಸೌಲಭ್ಯ ನೀಡಲಾಯಿತು ಎಂದು ಹೇಳಿದರು.
ಇದೇ ವೇಳೆ ಸರ್ಕಾರದಿಂದ ಬುಡಕಟ್ಟು ಜನರಿಗೆ ಭೂಮಿ ನೀಡಲಾಯಿತು. ಅಲ್ಲದೆ ವಿವಿಧ ಯೋಜನೆಗಳಡಿ ಅವರಿಗೆ ತರಬೇತಿ ನೀಡಿದ ಪರಿಣಾಮ ಬುಡಕಟ್ಟು ಸಮುದಾಯದವರು ಸ್ವತಂತ್ರವಾಗಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ನೀಡಿದ ಭೂಮಿಯಲ್ಲಿ ಉತ್ತಮ ತಳಿಯ ರಾಗಿ ಬೆಳೆದು ಮಹಿಳೆಯರು ಕೃಷಿ ವಿಶ್ವವಿದ್ಯಾಲಯದಿಂದ ಬಹುಮಾನ ಸ್ವೀಕರಿಸಿದ್ದಾರೆ. ಬಡಜನರ ಪರ ಸರ್ಕಾರದ ಹಲವು ಯೋಜನೆಗಳು ಹಾಗೂ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು ಬಡವರಿಗೆ ಸ್ವಾಭಿಮಾನದ ಬದುಕು ನಡೆಸುವಂತೆ ಮಾಡಬೇಕಿದೆ ಎಂದರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ರಮೇಶ್, ಕೃಷಿಕ್ ಸರ್ವೋದಯ ಫೌಂಡೇಶನ್ ಕಾರ್ಯದರ್ಶಿ ಟಿ. ತಿಮ್ಮೇಗೌಡ, ವೈದ್ಯೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ, ಚಿಂತಕ ಡಾ. ದೀಪಕ್ ವೋರಾ, ವಿಶ್ವಮಾನವ ಯುವ ವೇದಿಕೆಯ ಅಧ್ಯಕ್ಷೆ ಡಾ. ಮಧುರಾಣಿ ಗೌಡ, ರಿಬಿಲ್ಟ್ ಇಂಡಿಯಾ ಪೌಂಡೇಶನ್ ಸಂಸ್ಥಾಪಕ ಡಾ. ವರುಣ್ ಮೂರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net