ಕಿದ್ವಾಯಿಯಲ್ಲಿ ಯೋಗ- ಸಂಗೀತ ಥೆರಪಿ

Sound Music Theraphy in Kidwai
Sound Music Theraphy in Kidwai
Published on

ಪ್ರಮುಖ ಮುಖ್ಯಾಂಶಗಳು

  • * ಚಿತ್ತಶಾಂತಿ, ದೈಹಿಕ ಸ್ವಾಸ್ಥ್ಯ ವೃದ್ಧಿಗೆ ಉಪಯುಕ್ತ
  • * ತಿಂಗಳಲ್ಲಿ 40ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ
ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನೋವು ಮತ್ತು ಉಪಶಮನ ಆರೈಕೆ ವಿಭಾಗವು ಕ್ಯಾನ್ಸರ್ ರೋಗಿಗಳಿಗೆ ಯೋಗ ಮತ್ತು ಸೌಂಡ್ ಮ್ಯೂಸಿಕ್ ಥೆರಪಿ ಚಿಕಿತ್ಸೆಯನ್ನು ಪರಿಚಯಿಸಿದೆ.
ರೋಗಿಗಳಲ್ಲಿ ನೋವಿನೊಂದಿಗೆ ಎದುರಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳು, ಆತಂಕ, ಖಿನ್ನತೆ ಹಾಗೂ ಪ್ರತ್ಯೇಕತೆಯ ಸಂಕಟವನ್ನು ನಿವಾರಿಸಿ ಅವರ ಮೊಗದಲ್ಲಿ ನಗುವನ್ನು ಮೂಡಿಸಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಂಸ್ಥೆ ಈ ಹೆಜ್ಜೆ ಇಟ್ಟಿದೆ. ಇದರಡಿ ತಿಂಗಳಲ್ಲಿ 40ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಆಧುನಿಕ ಯುಗದಲ್ಲಿ ಸಂಗೀತ ಹಾಗೂ ಯೋಗ ಚಿಕಿತ್ಸೆಯಾಗಿಯೂ ರೂಪು ಪಡೆಯುತ್ತಿವೆ. ಯೋಗದಲ್ಲಿ ಧ್ಯಾನ ಹಾಗೂ ವಿವಿಧ ಆಸನಗಳು ದೇಹ- ಮನಸ್ಸುಗಳ ಸದೃಢತೆಗೆ ಸಹಕಾರಿಯಾಗಿವೆ. ಸಂಗೀತವು ಮನಸ್ಸಿಗೆ ಮುದ ನೀಡಿ ಒತ್ತಡ ತಗ್ಗಿಸುತ್ತದೆ. ಯೋಗ- ಸಂಗೀತ ಚಿಕಿತ್ಸೆಯಿಂದಾಗಿ ಏಕಾಗ್ರತೆ, ಗ್ರಹಿಕೆ ಶಕ್ತಿ, ಚಿತ್ತ ಶಾಂತಿ ಸಾಧ್ಯವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಅಲೋಪಥಿ ಸೇರಿ ಇತರೆ ವೈದ್ಯಕೀಯ ಪದ್ಧತಿಗಳಲ್ಲೂ ಯೋಗ ಮತ್ತು ಸಂಗೀತ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ವೈದ್ಯರು.

ಸಾಂತ್ವನ ನೀಡುವ ಕ್ಷಣ:

ಕಿದ್ವಾಯಿಯಲ್ಲಿನ ನೋವು ಮತ್ತು ಉಪಶಮನ ಆರೈಕೆ ಕೇಂದ್ರದಲ್ಲಿ ಸೌಂಡ್ ಮ್ಯೂಸಿಕ್ ಥೆರಪಿ ಹಾಗೂ ಯೋಗ ಚಿಕಿತ್ಸೆ ರೋಗಿಗಳಿಗೆ ಸಾಂತ್ವನ ನೀಡುತ್ತದೆ. ಶಬ್ದಗಳಿಂದ ಕೂಡಿದ ಸಂಗೀತ ಅಲೆಗಳನ್ನು ಮೊಳಗಿಸುವ ಮೂಲಕ ಪ್ರತಿ ಗುರುವಾರ ಸೌಂಡ್ ಮ್ಯೂಸಿಕ್ ಥೆರಪಿ ನೀಡಲಾಗುತ್ತದೆ. ಹಾಗೆಯೇ ಪ್ರತಿ ಬುಧವಾರ ಯೋಗ ತರಬೇತಿ ಇರುತ್ತದೆ. ಇದು ಕೇವಲ ರೋಗಿಗಳಿಗಷ್ಟೇ ಅಲ್ಲದೆ, ಅವರನ್ನು ಆರೈಕೆ ಮಾಡುವ ಕುಟುಂಬದ ಸದಸ್ಯರಿಗೂ ನೆರವಾಗಲಿದೆ. ಕಾರಣ ರೋಗಿಗಳ ಆರೈಕೆ, ಚಿಕಿತ್ಸೆಯ ಖರ್ಚು, ಕುಟುಂಬ ನಿರ್ವಹಣೆಯಲ್ಲಿ ಸಮಸ್ಯೆ ಸೇರಿ ಹಲವು ಕಾರಣಗಳಿಂದ ಅವರೂ ಸಹ ಮಾನಸಿಕವಾಗಿ ಬಳಲಿರುತ್ತಾರೆ. ಹಾಗಾಗಿ ಈ ಚಿಕಿತ್ಸೆ ರೋಗಿಗಳ ಜತೆಗೆ ಅವರ ಆರೈಕೆ ಮಾಡುವವರಿಗೂ ಉಪಯುಕ್ತ ಎನಿಸಿದೆ.

ಕಂಪನಗಳ ಅನುಭವ:

ರೋಗಿಗಳ ಮಾನಸಿಕ- ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಸೌಂಡ್ ಮ್ಯೂಸಿಕ್ ಥೆರಪಿಯಿಂದ ಹೊರಹೊಮ್ಮುವ ಕಂಪನಗಳನ್ನು ಕೇಳಿಸಲಾಗುವುದು. ಇದು ವಾದ್ಯಗಳ ಸಂಗೀತ, ಕೊಳಲು, ವೀಣೆ ಸೇರಿ ನಿರ್ದಿಷ್ಟ ಧ್ವನಿ ಆವರ್ತನಗಳನ್ನು ಉತ್ಪಾದಿಸುವ ಸೌಮ್ಯವಾದ ಶಬ್ದಗಳಂತಹ ವಾದ್ಯಗಳ ಬಳಕೆಯನ್ನು ಒಳಗೊಂಡಿರುತ್ತದೆ. ಈ ಶಬ್ದಗಳು ಇಡೀ ಕೊಠಡಿಯಲ್ಲಿ ಶಾಂತವಾದ ಕಂಪನ ಸೃಷ್ಟಿಸುತ್ತವೆ. ರೋಗಿಗಳು ಇದನ್ನು ಆಲಿಸಿದಾಗ, ಅವರ ಮನಸ್ಸು ಅತಿಯಾದ ಯೋಚನೆ, ಒತ್ತಡ ಮತ್ತು ಆತಂಕದಿಂದ ಹೊರಬಂದು ಶಾಂತತೆಯೊಂದಿಗೆ ವಿಶ್ರಾಂತಿಯ ಸ್ಥಿತಿಗೆ ಬರುತ್ತದೆ. ಇದಕ್ಕೆ ರೋಗಿಗಳು ಹಾಗೂ ಆರೈಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ಉಪಶಾಮಕ ಆರೈಕೆ ವಿಭಾಗದ ಮುಖ್ಯಸ್ಥ ಡಾ. ಎಂ.ಕೆ. ಯದುರಾಜ್.

ಸಂಗೀತ ಚಿಕಿತ್ಸೆ ರೋಗಿಯ ಅರೈಕೆಯೊಂದಿಗೆ ಸೇವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಚಿಕಿತ್ಸೆಯಲ್ಲಿ ಕೇವಲ ಕ್ಲಿನಿಕಲ್ ಲಿತಾಂಶವಲ್ಲದೆ ಭಾವನಾತ್ಮಕ ಯೋಗಕ್ಷೇಮ, ಸಂಪರ್ಕ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಈ ಚಿಕಿತ್ಸೆ ರೋಗಿಗಳ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

— -ಡಾ. ನವೀನ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ಸೌಂಡ್ ಮ್ಯೂಸಿಕ್ ಥೆರಪಿಯಿಂದ ಹೊಮ್ಮುವ ಶಬ್ದಗಳು ರೋಗಿಗಳ ಭಾವನಾತ್ಮಕ ಮತ್ತು ಮಾನಸಿಕ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇದು ರೋಗಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಬಗ್ಗೆ ಅಧ್ಯಯನ ಸಹ ಮಾಡಲಾಗುತ್ತಿದೆ.

— -ಡಾ. ಎಂ.ಕೆ. ಯದುರಾಜ್, ಉಪಶಾಮಕ ಆರೈಕೆ ವಿಭಾಗದ ಮುಖ್ಯಸ್ಥ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net