ಬೆಂಗಳೂರು: ಕೇಂದ್ರ ಪರಿಸರ ಇಲಾಖೆ ದಂಡ ಮತ್ತು ಮಿಟಿಗೇಷನ್ ಪ್ಲಾನ್ ಸೇರಿ 257 ಕೋಟಿ ರೂ. ಸಂದಾಯ ಮಾಡಬೇಕೆಂದು ಸೂಚಿಸಿದ್ದು, ಒಂದೆರಡು ದಿನದಲ್ಲೇ ಈ ಹಣ ಪಾವತಿಗೆ ಮಾರ್ಗದರ್ಶನ ನೀಡಿದ್ದೇನೆ. ವಾರದಲ್ಲಿ ಎತ್ತಿನಹೊಳೆ ಕಾಮಗಾರಿ ಮರು ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಎತ್ತಿನಹೊಳೆ, ಮೇಕೆದಾಟು, ಭದ್ರಾ ಮೇಲ್ದಂಡೆ ವಿಚಾರವಾಗಿ ಸಂಬಂಧಪಟ್ಟ ಶಾಸಕರು, ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೆ. ಷರತ್ತುಗಳನ್ನು ಒಪ್ಪಿಕೊಂಡು ಮುಂದುವರಿದಿದ್ದೇವೆ ಎಂದು ಹೇಳಿದರು.
ತುಮಕೂರು ಭಾಗದಲ್ಲೂ ಭೂಸ್ವಾಧೀನಕ್ಕೆ ಸರ್ವೇ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು. ಶೀಘ್ರವೇ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರು ತೆಗೆದುಕೊಂಡು ಹೋಗಲಾಗುವುದು. ಕೇಂದ್ರ ಪರಿಸರ ಇಲಾಖೆ ಷರತ್ತಿನಂತೆ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಬದಲಿ ಭೂಮಿ ಹಸ್ತಾಂತರ ಮಾಡಲಾಗುತ್ತಿದೆ. ಶೇ.10 ಭೂಮಿ ವರ್ಗಾವಣೆ ಬಾಕಿಯಿತ್ತು. ವಾರದೊಳಗೆ ಈ ಪ್ರಕ್ರಿಯೆ ನಡೆಯಲಿದೆ. ಎಲ್ಲೆಲ್ಲಿ ಭೂಮಿ ಹಸ್ತಾಂತರಕ್ಕೆ ಅವಕಾಶ ಇದೆಯೋ ಅದನ್ನು ಪಟ್ಟಿ ಮಾಡಿ ಹಸ್ತಾಂತರಿಸಲಾಗುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ಗೃಹ ಸಚಿವ ಡಾ. ಜಿ. ಪರಮೇಶ್ವರ ಸಭೆಯಲ್ಲಿದ್ದರು.
5300 ಎಕರೆ ಅರಣ್ಯ ಇಲಾಖೆಗೆ
ಮೇಕೆದಾಟು ಯೋಜನೆ ಸಂಬಂಧ ಡಿಪಿಆರ್ ಸಿದ್ಧವಾಗಿದೆ. ಅದನ್ನು ಸಹ ಸಮಿತಿ ಮುಂದೆ ಸಲ್ಲಿಕೆ ಮಾಡಲಾಗುವುದು. ಮತ್ತೊಮ್ಮೆ ವೆಚ್ಚ ಪರಿಷ್ಕರಣೆ ಮಾಡಿದ್ದೇವೆ. 5,300 ಎಕರೆ ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬೇಕಿದೆ. ಈ ಬಗ್ಗೆಯೂ ಕಂದಾಯ ಇಲಾಖೆ ಸಚಿವರೊಂದಿಗೆ ಚರ್ಚೆ ಮಾಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.