ಮಣ್ಣೂರಿನಲ್ಲಿ ಯಲ್ಲಮ್ಮ ದೇವಿ ಜಾತ್ರೆ 29ರಿಂದ

,
,
Published on

ಕರಜಗಿ: ಮಣ್ಣೂರ ಗ್ರಾಮದಲ್ಲಿ ಏ.29 ರಿಂದ ಮೇ 2ರವರೆಗೆ ಅತ್ಯಂತ ವಿಜೃಂಭಣೆಯಿಂದ ಶ್ರೀ ಯಲ್ಲಮ್ಮ ದೇವಿಯ ಜಾತ್ರೋತ್ಸವ ಜರುಗಲಿದೆ ಎಂದು ಯಲ್ಲಮ್ಮ ದೇವಿ ಚಾರಿಟೇಬಲ್​ ಮತ್ತು ವೆಲ್​ಫೇರ್​ ಟ್ರಸ್ಟ್​ ತಿಳಿಸಿದೆ. ಏ.29ರಂದು ಸಂಜೆ ಶಿವಬಾಳನಗರದ ಭಕ್ತರಿಂದ ವಿವಿಧ ವಾದ್ಯಗಳೊಂದಿಗೆ ನಂದಿಕೋಲು ಮೆರವಣಿಗೆ ನಡೆಯಲಿದೆ. ಏ.30ರಂದು ಯಲ್ಲಮ್ಮ ದೇವಿ ಬಾಸಿಂಗ್​ ಮೆರವಣಿಗೆಯೂ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು, ರಾತ್ರಿ 9ಕ್ಕೆ ಮಂದಿರಕ್ಕೆ ಆಗಮಿಸುವುದು. ರಾತ್ರಿ 10.30ಕ್ಕೆ ಪ್ರೇಮಾ ಅಫಜಲಪುರ ಹಾಗೂ ಸಂಗಡಿಗರಿಂದ ಚೌಡಕಿ ಆಟ ಹಾಗೂ ಪದಗಳು ಜರುಗಲಿವೆ. ಮೇ 1ರಂದು ಹುಣ್ಣಿಮೆಯಂದು ಬೆಳಗ್ಗೆ 5ಕ್ಕೆ ಪಡಸಾವಳಗಿಯ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ದೇವಿಗೆ ರುದ್ರಾಭಿಷೇಕ ಜರುಗುವುದು. 7ಕ್ಕೆ ದೇವಿಯ ವಸಾಭರಣ, 9ರಿಂದ ನೈವೇದ್ಯ ಅರ್ಪಣೆ, ಸಂಜೆ 4ಕ್ಕೆ ದೇವಿ ಪಲ್ಲಕ್ಕಿ ಮೆರವಣಿಗೆಯೂ ನವಿಲು, ಕರಡಿ, ಕುದುರೆ ಹಾಗೂ ಗೊಂಬೆ ಕುಣಿತದೊಂದಿಗೆ ವಿವಿಧ ವಾದ್ಯಗಳ ಜತೆಗೆ ಭೀಮಾ ನದಿ ಮಧ್ಯದಲ್ಲಿರುವ ದೇವಿ ಮಂದಿರಕ್ಕೆ ತಲುಪುವುದು. ರಾತ್ರಿ 7ರಿಂದ 9 ಗಂಟೆವರೆಗೆ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ನಂತರ ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿರುವ ದೇವಿಯ ಮಂದಿರಕ್ಕೆ ಆಗಮಿಸುವುದು. ಮೇ 1ರಿಂದ 5ರ ವರೆಗೆ ಹೊಸ ಪಾದಗಟ್ಟೆ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನದ ಹತ್ತಿರ ಜಾನುವಾರುಗಳ ಹಾಗೂ ಕುರಿಗಳ ಜಾತ್ರೆ ನಡೆಯಲಿದೆ. ಮೇ 2ರಂದು ಬೆಳಗ್ಗೆ 9ಕ್ಕೆ ಗೀಗೀ ಪದಗಳು ಜರುಗುವವು. ಸಂಜೆ 5ರಿಂದ 7ರವರೆಗೆ ಕುಸ್ತಿ ಪಂದ್ಯಾವಳಿ ನಡೆಯಲಿವೆ. ಮೇ 5ರಂದು ಟ್ರಸ್ಟ್​ನಿಂದ ಉತ್ತಮ ಜಾನುವಾರುಗಳಿಗೆ ಬಹುಮಾನ ವಿತರಿಸಲಾಗುವುದು. ಜಾತ್ರೋತ್ಸವಕ್ಕೆ ಆಗಮಿಸಲು ಅಫಜಲಪುರ, ಕಲಬುರಗಿ, ಇಂಡಿ, ವಿಜಯಪುರ, ಅಕ್ಕಲಕೋಟ, ಸೋಲಾಪುರ, ಮುಂಬೈನಿಂದ ನೇರ ಬಸ್​ ಸೌಕರ್ಯವಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದು ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net