ಯಾದಗಿರಿ ಜಿಲ್ಲೆಯ ಅರಕೇರಾ(ಬಿ) ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಶಿವಪ್ರಸಾದ ಮೈತ್ರಿ ಮಾತನಾಡಿದರು. ಭೀಮರೆಡ್ಡಿ, ಮಮತಾಜ ಬೇಗಂ, ರವಿಕುಮಾರ ಕೊಲ್ಲೂರು, ವೈದ್ಯರಾದ ಡಾ.ಮುಜಮಿಲ್ ಅಹ್ಮದ್, ಡಾ.ಶ್ರುತಿ, ಬಾ.ದಿನೇಶ ಕಾಕರೆ ಇತರರಿದ್ದರು.
ಯರಗೋಳ: ಪ್ರತಿ ಕೂಲಿಕಾರ್ಮಿಕರ ಆರೋಗ್ಯ ರಣೆ ಸರ್ಕಾರದ ಆದ್ಯತೆಯಾಗಿದ್ದು, ಆರೋಗ್ಯವಂತ ಕಾರ್ಮಿಕರಿಂದ ಮಾತ್ರ ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸಾಧ್ಯ ಎಂದು ಅರಕೇರಾ(ಬಿ) ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಮೈತ್ರಿ ಹೇಳಿದರು.
ಅರಕೇರಾ(ಬಿ) ಗ್ರಾಮದಲ್ಲಿ ಗುರುವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸುವ ಮೂಲಕ ಕಾರ್ಮಿಕರಿಗೆ ಅಗತ್ಯ ವೈದ್ಯಕಿಯ ಸೇವೆ ಪೂರೈಸಲು ಅನುಕೂಲವಾಗಲಿದೆ. ಅಲ್ಲದೆ ನಿತ್ಯ ಕಠಿಣ ಶ್ರಮದ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ವೈದ್ಯರು ಆರೋಗ್ಯ ಸಿಬ್ಬಂದಿ ಕಾರ್ಮಿಕರ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಹಿಮೋಗ್ಲೋಬಿನ್ ಮಟ್ಟ, ದೇಹದ ತೂಕ ಸೇರಿ ವಿವಿಧ ಆರೋಗ್ಯ ತಪಾಸಣೆ ಮಾಡಿದರು. ಆರೋಗ್ಯ ಸಮಸ್ಯೆ ಕಂಡುಬಂದ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ಕುರಿತು ಸಲಹೆ ನೀಡುವುದರ ಜತೆಗೆ ಅಗತ್ಯ ಔಷಧವನ್ನು ಉಚಿತವಾಗಿ ನೀಡಲಾಯಿತು.