ವಲಸೆ ಹೋಗದೆ ನರೇಗಾದಲ್ಲಿ ಕೆಲಸ ಮಾಡಿ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಲಸರಮ್​ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದಿರುವ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಜಿಪಂ ಯೋಜನಾ ನಿರ್ದೇಶಕರ ಸಿ.ಬಿ.ದೇವರಮನಿ ಗುರುವಾರ ಭೇಟಿ ನೀಡಿ ಪರಿಶೀಸಿದರು.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಲಸರಮ್​ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದಿರುವ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಜಿಪಂ ಯೋಜನಾ ನಿರ್ದೇಶಕರ ಸಿ.ಬಿ.ದೇವರಮನಿ ಗುರುವಾರ ಭೇಟಿ ನೀಡಿ ಪರಿಶೀಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ ಸಲಹೆ
  • ವಿವಿಧ ಕಾಮಗಾರಿ ಸ್ಥಳಕ್ಕೆ ಭೇಟಿ
ಯಾದಗಿರಿ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೊಂದಾಯಿತ ಗ್ರಾಮೀಣ ಕೂಲಿ ಕಾರ್ಮಿಕರ ಕುಟುಂಬಕ್ಕೆ ಪ್ರತಿ ವರ್ಷ ನೂರು ದಿನ ಗ್ರಾಮ ಪಂಚಾಯಿತಿಯಿಂದ ನೀಡುವ ಕೂಲಿ ಕೆಲಸದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿಬಿ ದೇವರಮನಿ ಹೇಳಿದರು.
ಜಿಲ್ಲೆಯ ವಡಗೇರಾ ತಾಲೂಕಿನ ಗುಲಸರಮ್​ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಕಾಮಗಾರಿಯ ಪ್ರಗತಿ, ಗುಣಮಟ್ಟ ಹಾಗೂ ಭೌತಿಕ ಸ್ಥಿತಿ ಪರಿಶೀಲಿಸಿ, ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿ ಮಾತನಾಡಿದರು.
ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಪಾವತಿಯಾಗುತ್ತಿದೆಯೇ, ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿ ಇತರೆ ಅಗತ್ಯ ಮೂಲ ಸೌಲಭ್ಯಗಳಿವೆ ಎಂದು ವಿಚಾರಿಸಿದ ಅವರು, ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮಸ್ಟರ್​ ರೂಲ್​ ಹಾಗೂ ಫೋಟೋ ಆಧಾರಿತ ಹಾಜರಾತಿ ಪರಿಶೀಲಿಸಿದರು.
ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಆಸರೆಯಾಗಬೇಕು. ಅನುಷ್ಠಾನ ಮಾಡುವ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ, ನರೇಗಾ ಜಾಬ್​ ಕಾರ್ಡ್​ ಪಡೆದ ಪ್ರತಿ ಕುಟುಂಬಕ್ಕೂ ವರ್ಷದಲ್ಲಿ ನೂರು ದಿನಗಳ ಕೂಲಿ ಕೆಲಸ ನೀಡುವ ಖಾತ್ರಿಯಾಗಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಯೋಜನೆಯಡಿ ಹಿಂದಿನ ವರ್ಷದಲ್ಲಿ ಅನುಷ್ಠಾನ ಮಾಡಿ ಅಪೂರ್ಣಗೊಳಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಬಾಕಿ ಉಳಿದ ಅನುದಾನಕ್ಕೆ ಅನುಗುಣವಾಗಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿ, ನರೇಗಾ ಯೋಜನೆಯಡಿ ಕೆಲಸ ಇಲ್ಲ ಎಂದು ಹೇಳಬೇಡಿ. ಈಗಾಗಲೇ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅನುಮೊದಿಸಿದ ಸಮುದಾಯ ಕಾಮಗಾರಿಗಳು ಇದ್ದರೆ ಗ್ರಾಮ ಪಂಚಾಯಿತಿಗಳಲ್ಲಿನ ಕೂಲಿ ಬೇಡಿಕೆಗೆ ಅನುಸಾರ ಅನುಮೊದನೆ ಪಡೆದು ಕೆಲಸ ಆರಂಭಿಸಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆಯ ಎಡಿಪಿಸಿ ಬನ್ನಪ್ಪ ಬೈಟಪುಲ್ಲಿ, ಜಿಲ್ಲಾ ಐಇಸಿ ಸಂಯೋಜಕ ಪರಶುರಾಮ ಜೀನಕೇರಾ, ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿ ಅನೇಕರು ಇದ್ದರು.

ಮಹಾತ್ಮಗಾಂಧಿ ನರೇಗಾ ಯೋಜನೆ ಬಂದಾಗಿದೆ ಎಂದು ಜನರಲ್ಲಿ ತಪ್ಪು ಮಾಹಿತಿ ಇದೆ. ಇದು ಸರಿಯಲ್ಲ, ಬೇಸಿಗೆ ಇರುವುದರಿಂದ ರೈತರ ಹೊಲದಲ್ಲಿ ಕೂಲಿಕಾರರಿಗೆ ಕೆಲಸ ಸಿಗುತ್ತಿಲ್ಲ, ಹೀಗಾಗಿ ಗ್ರಾಮೀಣ ಕೂಲಿಕಾರರು ಕೆಲಸಕ್ಕಾಗಿ ಗ್ರಾಮ ಪಂಚಾಯಿತಿಗೆ ಬಂದರೆ ಸರಿಯಾದ ಮಾಹಿತಿ ನೀಡಿ. ಕೂಲಿ ಕೆಲಸಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗದಂತೆ ಕೆಲಸ ನೀಡಿ.

— > ಸಿ.ಬಿ.ದೇವರಮನಿ ಯೋಜನಾ ನಿರ್ದೇಶಕರು, ಜಿಪಂ ಯಾದಗಿರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net