ಅಬಕಾರಿ ಇಲಾಖೆಯಲ್ಲಿ ಕೌನ್ಸೆಲಿಂಗ್ ವರ್ಗಾವಣೆಗೆ ತಿಲಾಂಜಲಿ?- excise counselling stop soon

 ಅಬಕಾರಿ ಇಲಾಖೆ
ಅಬಕಾರಿ ಇಲಾಖೆ
Published on

ಬೆಂಗಳೂರು: ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜಾರಿಗೆ ತಂದಿದ್ದ ಅಬಕಾರಿ ಕೌನ್ಸೆಲಿಂಗ್ ವರ್ಗಾವಣೆಗೆ ತಿಲಾಂಜಲಿ ಇಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಬಗ್ಗೆ ಗುರುತರ ಆರೋಪಗಳಿವೆ.

ರಾಜಕೀಯ ಹಿನ್ನೆಲೆ ಹೊಂದಿರುವವರು ಮತ್ತು ಹಣವುಳ್ಳ ಅಬಕಾರಿ ಇಲಾಖೆಯ ಕೆಲ ಬಲಾಢ್ಯ ಅಧಿಕಾರಿಗಳು, ಕೌನ್ಸೆಲಿಂಗ್ ವರ್ಗಾವಣೆ ಸ್ಥಗಿತಗೊಳಿಸಲು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಲಾಬಿ ನಡೆಸುತ್ತಿದ್ದಾರೆ. ಇದರಿಂದ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರು ಮೂಲೆಗುಂಪು ಆಗಲಿದ್ದಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ಕೌನ್ಸೆಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಬಾರದು. ಕೌನ್ಸೆಲಿಂಗ್‌ನಿಂದ ಸಾಕಷ್ಟು ಅಧಿಕಾರಿಗಳಿಗೆ ಅನುಕೂಲವಾಗಿದೆ. ಇದನ್ನು ಮುಂದುವರಿಸುವಂತೆ ಸರ್ಕಾರಕ್ಕೆ ಅಬಕಾರಿ ನಿರೀಕ್ಷಕ ಸಂಘದವರು ಪತ್ರ ಬರೆದಿದ್ದಾರೆ.
ಕಳೆದ ವರ್ಷ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಗ್ರೂಪ್ ‘ಸಿ’ ವೃಂದದ ಅಬಕಾರಿ ನಿರೀಕ್ಷಕರು, ನಿರೀಕ್ಷಕರು ಸೇರಿ 415 ಸಿಬ್ಬಂದಿಯನ್ನು ಸೇವಾವಧಿ ಹಿರಿತನ ಆಧಾರದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗಿತ್ತು. ಆದರೆ, ಈ ಬಾರಿ ಆರ್ಥಿಕ ಇಲಾಖೆ ಅನುಮೋದನೆ ನೀಡದ ಕಾರಣ ಪ್ರಸಕ್ತ ಸಾಲಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ.
ಕಳೆದ ಮಾರ್ಚ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ಗ್ರೂಪ್ ‘ಬಿ’ ವೃಂದದ ಅಬಕಾರಿ ಉಪ ಅಧೀಕ್ಷಕರು ಮತ್ತು ಅಧೀಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಬಾರಿಯ ಸಾರ್ವತ್ರಿಕ ವರ್ಗಾವಣೆ ವೇಳೆ ಅವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಬೇಕಿತ್ತು. ಆದರೆ, ಈ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ.
ಕೌನ್ಸೆಲಿಂಗ್ ವರ್ಗಾವಣೆಯಿಂದ ಅನುಕೂಲ:
ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವುದರಿಂದ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಆಸ್ಪದ ಇರುವುದಿಲ್ಲ. ಸೇವಾವಧಿ ಹಿರಿತನ ಆಧಾರದಲ್ಲಿ ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿ ನಯಾಪೈಸೆಯೂ ಲಂಚ ನಡೆಯುವುದಿಲ್ಲ.
ಕೌನ್ಸೆಲಿಂಗ್ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾದರೆ ಅಧೀಕ್ಷಕ, ಉಪ ಅಧೀಕ್ಷಕ, ನಿರೀಕ್ಷಕ, ಉಪ ನಿರೀಕ್ಷಕ, ಮುಖ್ಯ ಪೇದೆ ಮತ್ತು ಪೇದೆಗಳು ವರ್ಗಾವಣೆಗೆ ಲಕ್ಷಾಂತರ ರೂ. ಲಂಚ ನೀಡಬೇಕಾಗುತ್ತದೆ. ಅತಿ ಲಂಚ ನೀಡಿದವರಿಗೆ ಅಯಕಟ್ಟಿನ ಹುದ್ದೆ ಸಿಕ್ಕರೆ, ಹಣ ನೀಡದವರಿಗೆ ಬ್ರಿವರಿ, ಡಿಸ್ಟ್ರಲರಿ ಸೇರಿ ಇನ್ಯಾವುದೋ ಡಮ್ಮಿ ಹುದ್ದೆಗೆ ವರ್ಗಾಯಿಸಲಾಗುತ್ತದೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳು ಸರ್ಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದ್ದು, ಅವರನ್ನು ಸದೆಬಡಿಯುವ ಅಗತ್ಯವೂ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net