ಕೋಟಿ ದಾಟಿದ ವೈಟ್‌ಕಾಲರ್ ವೃತ್ತಿಪರರು

ಮೈಸೂರು ಅರಮನೆ
ಮೈಸೂರು ಅರಮನೆ
Published on
ಬೆಂಗಳೂರು: ರಾಜ್ಯದ ಒಟ್ಟು ಜನಸಂಖ್ಯೆಯ ಶೇ.67 ಮಂದಿ ಕೆಲಸ ಮಾಡುವ ಮಾನವ ಸಂಪನ್ಮೂಲ ಲಭ್ಯವಿದೆ. ಇದರಲ್ಲಿ ಸಕ್ರಿಯ ಮತ್ತು ಸುಲಭವಾಗಿ ಲಭ್ಯವಿರುವ ವೈಟ್-ಕಾಲರ್ (ಕಚೇರಿ ಆಧಾರಿತ ವೃತ್ತಿಪರ) 1.01 ಕೋಟಿ ಪ್ರತಿಭಾ ಸಂಪನ್ಮೂಲವನ್ನು ಹೊಂದಿದೆ.
ವೈಟ್-ಕಾಲರ್ ಪ್ರತಿಭೆಗಳ ಸಂಖ್ಯೆ ಆಧಾರದ ಮೇಲೆ ನೋಡಿದಾಗ ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದೆ. ಸಕ್ರಿಯ ಮತ್ತು ಅನುಭವಿ ಪ್ರತಿಭೆಗಳ ಪೈಕಿ ಸಿಂಹಪಾಲು (40.43 ಲಕ್ಷ ) ಹೊಂದಿದ್ದು, ಅಂದರೇ ಶೇ.89 ಪಾಲು ಹೊಂದಿದ್ದು, ರಾಜ್ಯದ ಪ್ರಮುಖ ಪ್ರತಿಭಾ ಕೇಂದ್ರವಾಗಿ ಮುಂದುವರಿದಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಯನ ವರದಿಯಲ್ಲಿ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ 1 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕೆಲಸದ ಅನುಭವ ಇರುವವರು 45.2 ಲಕ್ಷ (ಶೇ.45) ಉದ್ಯೋಗಿಗಳು ಸಿಗಲಿದ್ದಾರೆ. ಇದರಲ್ಲಿ ವೈವಿಧ್ಯಮಯ ಅನುಭವ ಹಂತಗಳನ್ನು ಒಳಗೊಂಡಿದ್ದಾರೆ. ಉದ್ಯೋಗಿಗಳ ಕೌಶಲ ಮತ್ತು ಅನುಭವದ ಶ್ರೇಣಿಯನ್ನು ವಿಂಗಡಿಸಬಹುದು. ಒಟ್ಟು 45.2 ಲಕ್ಷ ಸಕ್ರಿಯ ಮತ್ತು ಅನುಭವಿ ಉದ್ಯೋಗಿಗಳ ಪೈಕಿ 6 ವರ್ಷಗಳವರೆಗೆ ಅನುಭವ ಹೊಂದಿರುವ 16.95 ಲಕ್ಷ ಉದ್ಯೋಗಿಗಳು 3ನೇ ಒಂದರಷ್ಟು (ಶೇ. 37) ಪಾಲನ್ನು ಹೊಂದಿದ್ದಾರೆ.
6 ರಿಂದ 12 ವರ್ಷಗಳ ಅನುಭವ ಹೊಂದಿರುವ ಮಧ್ಯಮ ಮತ್ತು ಮಧ್ಯಮ-ಹಿರಿಯ ಹಂತದ ನೌಕರರು ಶೇ.32 ಇದ್ದಾರೆ. ಇನ್ನು, 12 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಹಿರಿಯ ಉದ್ಯೋಗಿಗಳು ಶೇ.31 ಇದ್ದಾರೆ. ಅನುಭವದ ಮಟ್ಟ ಹೆಚ್ಚಾದಂತೆ ಸಕ್ರಿಯ ವೃತ್ತಿಪರ ಸಮೂಹದಲ್ಲಿ ಮಹಿಳೆಯರ ಸಂಖ್ಯೆ ಕ್ರಮೇಣ ಇಳಿಮುಖ ಆಗುತ್ತಿದೆ. ಮಹಿಳೆಯರು ವಯಸ್ಸು ಮತ್ತು ಕುಟುಂಬ ನಿರ್ವಹಣೆ ಕಾರಣದಿಂದ ನೌಕರಿಯಿಂದ ಹೊರಬರುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ಕರ್ನಾಟಕದ ಐಟಿ/ಐಟಿಇಎಸ್ ವಲಯವು ವೈಟ್-ಕಾಲರ್ ಉದ್ಯೋಗಿಗಳಿಗೆ ಪ್ರಮುಖ ಉದ್ಯೋಗದಾತ ವಲಯವಾಗಿದೆ. ಸಕ್ರಿಯ ಮತ್ತು ಅನುಭವಿ ಉದ್ಯೋಗಿಗಳ ಪೈಕಿ 3/1 ಭಾಗಕ್ಕೂ ಹೆಚ್ಚು ಮಂದಿ (16.1 ಲಕ್ಷ) ಐಟಿ/ಐಟಿಇಎಸ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬ್ಯಾಂಕಿಂಗ್, ವಿಮಾ, ವಾಣಿಜ್ಯ ಸಲಹಾ ಮತ್ತು ಸೇವೆಗಳು, ಲೆಕ್ಕಪತ್ರ ನಿರ್ವಹಣೆ ಹಾಗೂ ಲೆಕ್ಕ ಪರಿಶೋಧನೆ ಮತ್ತು ವಾಹನ ತಯಾರಿಕಾ ವಲಯಗಳು ಐಟಿ/ಐಟಿಇಎಸ್ ವಲಯಕ್ಕಿಂತ ಬಹಳ ಹಿಂದಿವೆ. ಇದರಲ್ಲಿಯೂ ಐಟಿ/ಟಿಇಎಸ್ ವಲಯದಲ್ಲಿ ಶೇ.65 ಪುರುಷ ಟೆಕ್ಕಿಗಳು ಸಿಕ್ಕರೆ ಶೇ.35 ಮಹಿಳಾ ಟೆಕ್ಕಿಗಳು ನೌಕರಿ ಮಾಡುತ್ತಿದ್ದಾರೆ. ಬ್ಯಾಂಕಿಂಗ್ ಮತ್ತು ಲೆಕ್ಕ ಪರಿಶೋಧನೆ ವಲಯದಲ್ಲಿ ಮಹಿಳೆಯರು ಶೇ.43 ಇರುವುದು ಕಾಣಬಹುದಾಗಿದೆ.
ವೈಟ್-ಕಾಲರ್ ಉದ್ಯೋಗಿಗಳಲ್ಲಿ 5 ಪ್ರಮುಖ ವೃತ್ತಿ ವಿಭಾಗಗಳು ಒಟ್ಟಾರೆಯಾಗಿ ಶೇ.56 ಹೆಚ್ಚು ಪಾಲನ್ನು ಹೊಂದಿವೆ. 10.20 ಲಕ್ಷ ಇಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಇದಾದ ಮೇಲೆ ಬ್ಯಾಂಕಿಂಗ್ ಮತ್ತು ವ್ಯಾಪಾರ, ಐಟಿ ಕ್ಷೇತ್ರದ ಉದ್ಯೋಗಿಗಳು ಸ್ಥಾನ ಪಡೆದಿದ್ದಾರೆ.

ಸಾಂಸ್ಕೃತಿಕ ನಗರಿಯತ್ತ ಉದ್ಯೋಗಿಗಳು :

ಕಳೆದ 1 ವರ್ಷದಿಂದ ಸಾಂಸ್ಕೃತಿಕ ನಗರ ಮೈಸೂರು ಐಟಿ/ಬಿಟಿ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ದೇಶದ ಪ್ರಮುಖ ನಗರಗಳಿಂದ ಮೈಸೂರಿಗೆ ಉದ್ಯೋಗಿಗಳ ವಲಸೆ ಮತ್ತು ಇಲ್ಲಿಂದ ಹೊರಗೆ ಹೋಗುವ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಬೆಂಗಳೂರು ನಗರದಿಂದ 1600 ಉದ್ಯೋಗಿಗಳು, ಹೈದರಾಬಾದ್(300), ಚೆನ್ನೈ (100), ಮಂಗಳೂರು(100), ನವದೆಹಲಿ(100) ಮತ್ತು ಇತರ ನಗರದಿಂದ 1 ಸಾವಿರು ಉದ್ಯೋಗಿಗಳು ಮೈಸೂರಿಗೆ ಬಂದಿದ್ದಾರೆ. ದೇಶದಲ್ಲಿ ವೈಟ್ ಕಾಲರ್ ಉದ್ಯೋಗಿಗಳ ವಲಯ ಪ್ರಮಾಣಕ್ಕೆ ಹೋಲಿಸಿದರೇ ಮೈಸೂರಿಗೆ ಶೇ.69 ಆಗಮಿಸಿದ್ದಾರೆ.
ಅದೇ ರೀತಿಯಾಗಿ ದೇಶದ ಪ್ರಮುಖ ನಗರಗಳಿಗೆ ವಲಸೆಯಾಗಿರುವ ಉದ್ಯೋಗಿಗಳಲ್ಲಿ ಶೇ. 86 ಮೈಸೂರಿನಿಂದ ಹೋಗಿದ್ದಾರೆ. ಹೆಚ್ಚಾಗಿ ಬೆಂಗಳೂರು(3400), ಹೈದರಾಬಾದ್(200), ಚೆನ್ನೈ(100), ಮಂಗಳೂರು(90), ಮುಂಬೈ(80) ಮತ್ತು ಇತರ ನಗರಗಳಿಗೆ 630 ಉದ್ಯೋಗಿಗಳು ವಲಸೆ ಹೋಗಿರುವುದು ವರದಿಯಾಗಿದೆ.

ಬೆಂಗಳೂರು ಬಿಟ್ಟರೆ ಮೈಸೂರು

ಬೆಂಗಳೂರು ನಗರ ಹೊರತುಪಡಿಸಿದರೆ ಮೈಸೂರು ನಗರದಲ್ಲಿ ಅತೀ ಹೆಚ್ಚು ವೈಟ್-ಕಾಲರ್ ಪ್ರತಿಭೆಗಳು ಸಿಗುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 40.43 ಲಕ್ಷ ನೌಕರರು ಇದ್ದು, ಪ್ರಥಮ ಸ್ಥಾನದಲ್ಲಿ ಇದೆ. ಮೈಸೂರು ನಗರ (90 ಸಾವಿರ) ದ್ವಿತೀಯ ಸ್ಥಾನದಲ್ಲಿದೆ. ಇದಾದ ಮೇಲೆ ಮಂಗಳೂರು- ಉಡುಪಿ (74.7 ಸಾವಿರ) ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ (73.9 ಸಾವಿರ) ಪ್ರತಿಭೆಗಳು ಕ್ರಮವಾಗಿ ಸಿಗಲಿದ್ದಾರೆ. ಮೈಸೂರಿನ ವೈಟ್-ಕಾಲರ್‌ನಲ್ಲಿ ಮಹಿಳೆಯರು ಶೇ.37 ಮತ್ತು ಪುರುಷರು ಶೇ.73 ಉದ್ಯೋಗಿಗಳು ಇದ್ದಾರೆ.
12 ವರ್ಷಕ್ಕಿಂತ ಹೆಚ್ಚಿನ ಅನುಭವ ಮತ್ತು ವೃತ್ತಿಪರರು ಶ್ರೇಣಿಯಲ್ಲಿ ಶೇ.27 ಇದ್ದಾರೆ. ಉದ್ಯಮಗಳಿಗೆ ಹಿರಿಯ ಹಂತದಲ್ಲಿ ಮತ್ತು ನಾಯಕತ್ವದ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲ ಸಮರ್ಥ್ಯ ಇರುವ ಮಾನವ ಸಂಪನ್ಮೂಲವನ್ನು ಮೈಸೂರು ಒದಗಿಸಲಿದೆ.

ಐಟಿ-ಬಿಟಿ ಕ್ಷೇತ್ರಕ್ಕೆ ಬೆಸ್ಟ್ :

ಮೈಸೂರಿನ ಐಟಿ/ಬಿಟಿ ಕ್ಷೇತ್ರವು ಅತಿ ದೊಡ್ಡ ಉದ್ಯೋಗ ಕ್ಷೇತ್ರವಾಗಿದ್ದು, ಸಕ್ರಿಯ ಉದ್ಯೋಗಿಗಳಲ್ಲಿ 5/1 ಭಾಗ ಉದ್ಯೋಗಿಗಳು ಇದ್ದಾರೆ. ಉತ್ಪಾದನಾ ಮತ್ತು ಬಿಎ್ಎಸ್‌ಐ(ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ) ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇದ್ದಾರೆ.
ಪ್ರೋಗ್ರಾಮಿಂಗ್, ಬಿಸಿನೆಸ್ ಸ್ಕಿಲ್ಸ್ ಮತ್ತು ಡೇಟಾ ಬೇಸ್ ಸ್ಕಿಲ್ಸ್ ಮೈಸೂರಿನ ಪ್ರಮುಖ ಮೂರು ಕೌಶಲ ಗುಂಪುಗಳಾಗಿವೆ. ಪ್ರೋಗ್ರಾಮಿಂಗ್ ಕೌಶಲ ಹೊಂದಿರುವ 25 ಸಾವಿರ ವೃತ್ತಿಪರರು, ಬಿಸಿನೆಸ್ ಸ್ಕಿಲ್ ಹೊಂದಿರುವ 21 ವೃತ್ತಿಪರರು ಇದ್ದಾರೆ. ಕಳೆದ 12 ತಿಂಗಳಲ್ಲಿ ಈ ಪ್ರಮುಖ ಕೌಶಲ ಗುಂಪುಗಳ ಪ್ರತಿಭಾ ಸಂಪನ್ಮೂಲವು ಶೇ.11 ರಿಂದ 17 ಹೆಚ್ಚಾಗಿದೆ. ಮೈಸೂರಿನ ಕೌಶಲಯುತ ಉದ್ಯೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net