2028ಕ್ಕೆ ಮತ ನೀಡಿ ಮತ್ತೊಮ್ಮೆ ಸಿಎಂ ಮಾಡಿ: ವಾಸವಿ ಸಮುದಾಯಕ್ಕೆ ಸಿಎಂ ಡಿಕೆಶಿ ಮನವಿ- make me CM again

 ಸಿಎಂ ಡಿ.ಕೆ.ಶಿವಕುಮಾರ್
ಸಿಎಂ ಡಿ.ಕೆ.ಶಿವಕುಮಾರ್
Published on

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ನೀಡುವ ಮೂಲಕ ಮತ್ತೊಮ್ಮೆ ನನ್ನನ್ನು ಸಿಎಂ ಆಗಿ ಮಾಡಬೇಕೆಂದು ವಾಸವಿ ಸಮುದಾಯದವರಿಗೆ, ಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.


ಕರ್ನಾಟಕ ಆರ್ಯವೈಶ್ಯ ಮಹಾಸಭಾ, ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮ್ಮಿಟ್’ ಉದ್ಘಾಟಿಸಿ ಮಾತನಾಡಿದರು. ಬನಶಂಕರಿಯ ಜಾಗದ ಬೇಡಿಕೆ ಹಾಗೂ ನೆಲಮಂಗಲದ ದಾಬಸ್‌ಪೇಟೆಯಲ್ಲಿ ವಿದ್ಯಾಸಂಸ್ಥೆಗೆ ಎದುರಾಗಿರುವ ಸಮಸ್ಯೆಗಳ ಕುರಿತು ಸಮುದಾಯದವರು ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಆದರೆ, 2028ಕ್ಕೆ ನೀವು ನಮ್ಮ ಪಕ್ಷಕ್ಕೆ ಮತ ಹಾಕುವ ಕೆಲಸ ಮಾಡಬೇಕು ಸಿಎಂ ಹೇಳಿದರು.
ಮಾತೃಭಾಷೆ ತೆಲುಗಾದರೂ ವಾಸವಿ ಸಮುದಾಯದ ಹೃದಯದ ಭಾಷೆ ಕನ್ನಡ. ಧರ್ಮ, ಸಂಸ್ಕಾರ ಹಾಗೂ ನ್ಯಾಯದ ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿರುವ ಈ ಸಮುದಾಯ ಉದ್ಯೋಗ ಪಡೆಯುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ಮೂಲಕ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಸಮುದಾಯದ ಸಾಂಪ್ರದಾಯಿಕ ಸ್ಥಾನಮಾನಗಳನ್ನು ಹೊರಗಿನಿಂದ ಬಂದ ಕೆಲವರು ಆಕ್ರಮಿಸಿಕೊಳ್ಳುತ್ತಿರುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನೀವು ಇಲ್ಲೇ ಹುಟ್ಟಿ, ಬೆಳೆದ ಮೂಲ ಕನ್ನಡಿಗರು. ನಿಮ್ಮ ಬೆಂಬಲಕ್ಕೆ ನಮ್ಮ ಸರ್ಕಾರ ಇರಲಿದೆ ಎಂದು ಸಿಎಂ ಭರವಸೆ ನೀಡಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಮಾತನಾಡಿ, ಮುಂದಿನ 10 ವರ್ಷಗಳಲ್ಲಿ ಹೊಸ ಒಂದು ಲಕ್ಷ ಉದ್ಯಮಿಗಳನ್ನು ರೂಪಿಸುವುದು ಹಾಗೂ 10 ಲಕ್ಷ ಉದ್ಯೋಗ ಸೃಷ್ಟಿಸುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಲಾಗಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಮೂಲಸೌಕರ್ಯ ವೆಚ್ಚಕ್ಕೆ ಸರ್ಕಾರ ಪ್ರಾಯೋಜಕತ್ವದ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಆಂಧ್ರಪ್ರದೇಶ ಸರ್ಕಾರದ ಸಚಿವ ಟಿ.ಜಿ.ಭಗತ್, ಶಾಸಕ ರಾಜಗೋಪಾಲ್ ಶ್ರೀರಾಮ್ ತಾತಯ್ಯ, ಎಂಎಲ್ಸಿ ಡಿ.ಎಸ್.ಅರುಣ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ರಾಮಪ್ರಸಾದ್, ಮಾಜಿ ಶಾಸಕ ಎಚ್​​.ಪಿ. ಮಂಜುನಾಥ್ ಸೇರಿ ಮತ್ತಿತರರಿದ್ದರು.
ಕರ್ನಾಟಕ ಆರ್ಯವೈಶ ಮಹಾಸಭಾ, ಡಿ.25ರಿಂದ ಮೂರು ದಿನ ಅರಮನೆ ಮೈದಾನದಲ್ಲಿ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ ಆಯೋಜಿಸಿದೆ. ಕ್ರಿಯಾಶೀಲ ಯುವ ಉದ್ದಿಮೆದಾರರನ್ನು ಉತ್ತೇಜಿಸುವುದು ಈ ಸಮಿಟ್‌ನ ಮುಖ್ಯ ಉದ್ದೇಶ. ಜಾಗತಿಕ ವ್ಯಾಪಾರ, ವಹಿವಾಟುಗಳಲ್ಲಿ ಇಂದಿನ ಯುವ ಪೀಳಿಗೆಯನ್ನು ತೊಡಗಿಸಲು ಪ್ರೇರೇಪಿಸಲಾಗುವುದು.
- ಎಸ್.ಇ.ಸುಧೀಂದ್ರ, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net