ಈ ವೇಳೆ ವಿವಿಧ ಗ್ರಾಮಗಳ ಪೂಜ್ಯರು,ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದರಾಮ ಮೇತ್ರೆ, ವಿಶ್ವನಾಥ ರೆಡ್ಡಿ ಮಾಲಿ ಪಾಟೀಲ್, ವೆಂಕಟರೆಡ್ಡಿ ಮಾಲಿ ಪಾಟೀಲ್,ಚನ್ನಪ್ಪಗೌಡ ಮೊಸಂಬಿ, ಬಸವರಾಜ ಶಾಸ್ತ್ರಿ ಶಹಾಪುರ, ಶ್ರೀಶೈಲ್ ಪೀಠದ ವೈದಿಕರು ಸೇರಿದಂತೆಯೇ ಇತರರಿದ್ದರು
ಯಾದಗಿರಿ :ವಿಶ್ವಾರಾಧ್ಯರ ಮುಕ್ತಿಕ್ಷೇತ್ರ ಅಬ್ಬೆತುಮಕೂರನ್ನು ಅನುಗ್ರಹ ಕ್ಷೇತ್ರವನ್ನಾಗಿ ಮಾಡಿ, ಧರ್ಮ ಸಂಸ್ಕಾರಗಳೊಂದಿಗೆ ಮಠ ಬೆಳೆಸಿರುವ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳಂತೇ ಕಿರಿಯ ಶ್ರೀಗಳು ಆ ದಾರಿಯಲ್ಲಿ ಮುನ್ನಡೆಯಲಿ ಎಂದು ಕಾಶಿ ಸಿಂಹಾಸನಾಧೀಶ್ವರ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಆಶಿಸಿದರು.
ಸೋಮವಾರ ಶ್ರೀಮಠದ ಪಾವನ ಪ್ರಾಂಗಣದಲ್ಲಿ ಆಯೋಜಿಸಿದ್ದ ಧರ್ಮ ಸಂಸ್ಕಾರದ ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳಾದ ಶಿವಶೇಖರ ಸ್ವಾಮಿಗಳಿಗೆ ಪಟ್ಟಾಧಿಕಾರ ಮಹೋತ್ಸವದ ಮಂಗಲ ಸ್ನಾನ,ಪೂಜಾ ಕಾರ್ಯ ನೆರವೇರಿಸಿ,ಅವರಿಗೆ ಶಿವಶೇಖರ ವಿಶ್ವಾರಾಧ್ಯ ಶಿವಾಚಾರ್ಯರು ಎಂಬ ನೂತನ ಹೆಸರು ನಾಮಕರಣ ಮಾಡಿ ಮಾತನಾಡಿದರು.
ವಿಶ್ವಾರಾಧ್ಯರಿಗೂ ಕಾಶಿಪೀಠಕ್ಕೂ ಅನ್ಯೋನ್ಯ ಸಂಬಂಧವಿದೆ. ಗಂವ್ಹಾರದ ಪಂಚಗೃಹ ತೋಪಕಟ್ಟಿ ಹೀರೆಮಠದ ಎರಡು ಕುಡಿಗಳಾದ ವಿಶ್ವಾರಾಧ್ಯರು, ಬಸವಾರಾದ್ಯರು ಕಾಶಿಯಲ್ಲಿ ಸುಮಾರು 12 ವರ್ಷಗಳ ಕಾಲ ಸಕಲ ವೇದ, ಉಪನಿಷತ್ತು, ಶೈವಾಗಮ, ಸಂಸ್ಕ್ರತದ ಶಿಕ್ಷಣ ಕಲಿತು ಶ್ರೇಷ್ಠ ಜ್ಞಾನಿಗಳಾಗಿದ್ದರೆಂದರು
ಅಂತಹ ವಿಶ್ವಾರಾಧ್ಯರ ಸಮಾಧಿಯನ್ನೇ ಇಂದು ಬೃಹತ್ ಧರ್ಮಾಚರಣೆಯ ಕೇಂದ್ರವನ್ನಾಗಿ ಮಾಡುವಲ್ಲಿ ಈಗಿನ ಗುರುಗಳಾದ ಗಂಗಾಧರ ಶ್ರೀಗಳ ಪಾತ್ರ ಹಿರಿದಾಗಿದೆ. ಇದೇ ದಾರಿಯಲ್ಲಿ
ಕಿರಿಯ ಶ್ರೀಗಳು ಸಾಗಿ ಮಠವನ್ನು ಮುಗಿಲೆತ್ತರಕ್ಕೆ ಬೆಳಸಲಿ, ಇದಕ್ಕೆ ಸಕಲ ಭಕ್ತರ ಸಹಕಾರ ಇರಲಿ ಎಂದು ಜಗದ್ಗುರುಗಳು ಹೇಳಿದರು.
ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳು ಮಾತನಾಡಿ, ಈ ಪವಿತ್ರ ತಾಣಕ್ಕೆ ವಿಶ್ವಾರಾಧ್ಯರೇ ಒಡೆಯರು, ಇಲ್ಲಿಗೆ ಭಕ್ತರೇ ನಮ್ಮ ಆಸ್ತಿ ಎಂದರು.
ಈ ವೇಳೆ ವಿವಿಧ ಗ್ರಾಮಗಳ ಪೂಜ್ಯರು,ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದರಾಮ ಮೇತ್ರೆ, ವಿಶ್ವನಾಥ ರೆಡ್ಡಿ ಮಾಲಿ ಪಾಟೀಲ್, ವೆಂಕಟರೆಡ್ಡಿ ಮಾಲಿ ಪಾಟೀಲ್,ಚನ್ನಪ್ಪಗೌಡ ಮೊಸಂಬಿ, ಬಸವರಾಜ ಶಾಸ್ತ್ರಿ ಶಹಾಪುರ, ಶ್ರೀಶೈಲ್ ಪೀಠದ ವೈದಿಕರು ಸೇರಿದಂತೆಯೇ ಇತರರಿದ್ದರು.