ಚಿಂಚೋಳಿ: ಐನಾಪುರ ಭಾಗದ ರೈತರ ಬಹುದಿನದ ಕನಸಾದ ಐನಾಪುರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಶುಕ್ರವಾರ ಜೆಸಿಬಿ ಯಂತ್ರ ಇತರ ಸಾಮಗ್ರಿಗಳು ಲಗ್ಗೆ ಇಟ್ಟಿದ್ದರಿಂದ ಮುಲ್ಲಾಮಾರಿ ಏತ ನೀರಾವರಿ ಹೋರಾಟ ಸಮಿತಿ ಹಾಗೂ ಚುನಾಯಿತ ಪ್ರತಿನಿಧಿಗಳ ಹೋರಾಟದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಐನಾಪುರ ಮತ್ತು ಸುತ್ತಮುತ್ತಲಿನ ಸುಮಾರು 17 ಗ್ರಾಮಗಳ (ಅಂದಾಜು 3,740 ಹೆಕ್ಟೇರ್) ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕೃಷ್ಣಾ ನ್ಯಾಯಾಧಿಕರಣದಡಿ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಉಳಿತಾಯ ಜಲವನ್ನು (ಸುಮಾರು 0.34 ಟಿಎಂಸಿ) ಬಳಸಿ ಈ ಏತ ನೀರಾವರಿ ಯೋಜನೆ ರೂಪಿಸಲಾಗಿದೆ.
ಈ ಭಾಗದಲ್ಲಿ ತೀವ್ರ ಮಳೆ ಕೊರತೆ ಮತ್ತು ಅಂತರ್ಜಲ ಕುಸಿತದಿಂದಾಗಿ ರೈತರು ಎದುರಿಸುತ್ತಿದ್ದ ಆರ್ಥಿಕ ಸಮಸ್ಯೆ ಪರಿಹರಿಸಲು ಸ್ಥಳಿಯರು ಮತ್ತು ವಿವಿಧ ಮಠಾಧೀಶರು ಐನಾಪುರ ಏತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಸುಮಾರು ಎರಡು ದಶಕ ನಿರಂತರ ಹೋರಾಟದ ಪ್ರತಿಫಲ ಸಿಗುವ ನಿರೀಕ್ಷೆ ಮೂಡಿದೆ.
ಸಮಿತಿಯ ಸುದೀರ್ ಹೋರಾಟ ಹಾಗೂ ಸ್ಥಳಿಯ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಸರ್ಕಾರ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಮೊದಲ ಹಂತದ ಕಾಮಗಾರಿಗಳಿಗಾಗಿ ಹಣ (ಸುಮಾರು 95 ಕೋಟಿಗೂ ಹೆಚ್ಚು) ಬಿಡುಗಡೆ ಮಾಡಿದೆ.
ಜಿಲ್ಲಾಡಳಿತಕ್ಕೆ ಒತ್ತಾಯ: ಇತ್ತೀಚೆಗೆ ಹೋರಾಟ ಸಮಿತಿ ಮುಖಂಡರು ಮತ್ತು ಮಠಾಧೀಶರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಆರಂಭಿಸಲು ವಿಳಂಬ ಮಾಡಲಾಗುತ್ತಿದೆ. ತಣವೇ ತಾಂತ್ರಿಕ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಿ ಜಮೀನುಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿತ್ತು.
17 ಹಳ್ಳಿ ರೈತರ ಬದುಕು ಬದಲು
ಹೋರಾಟ ಸಮಿತಿ ನಿರಂತರ ಪ್ರಯತ್ನದಿಂದಾಗಿ ಐನಾಪುರ, ಯಲ್ಮಾಮಡಿ, ಗಡಿಲಿಂಗದಳ್ಳಿ, ಬೆನಕೆಪಳ್ಳಿ, ಚೆನ್ನೂರ ಸೇರಿ 17 ಗ್ರಾಮಗಳ ರೈತರು ತೋಟಗಾರಿಕೆ, ಕಬ್ಬು, ತೊಗರಿ ಇತರ ವಾಣಿಜ್ಯ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಲು ಯೋಜನೆ ಅನುಷ್ಠಾನ ಅನುವು ಮಾಡಿಕೊಟ್ಟಿದೆ.
ಸದನದಲ್ಲಿ ಧ್ವನಿ ಎತ್ತಿದ ಶಾಸಕ ಡಾ.ಜಾಧವ್
ವಿಧಾನಸಭೆ ಅಧಿವೇಶನಗಳಲ್ಲೂ ಚಿಂಚೋಳಿ ತಾಲೂಕಿನ ಒಣಭೂಮಿ ಮತ್ತು ಮುಲ್ಲಾಮಾರಿ ನದಿ ನೀರು ಬಳಸಿಕೊಳ್ಳುವ ಈ ಯೋಜನೆಗಳ ಬಗ್ಗೆ ಶಾಸಕ ಡಾ.ಅವಿನಾಶ ಜಾಧವ್ ಧ್ವನಿ ಎತ್ತಿದ್ದರು. ಹಣ ಬಿಡುಗಡೆಯಾಗಿ ಎಂಟು ತಿಂಗಳಾಗಿದ್ದು, ಶ್ರೀವೇ ತಾಂತ್ರಿಕ ಮತ್ತು ಟೆಂಡರ್ ಪ್ರಕ್ರಿಯೆ ಮುಗಿಸಿ ಕೆಲಸ ಆರಂಭಿಸಲು ಮುಲ್ಲಾಮಾರಿ ಕೆಳದಂಡೆ ಯೋಜನೆ ನಿಗಮದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಶುಕ್ರವಾರ ಗುತ್ತಿಗೆದಾರರು ಯಂತ್ರ, ಸಾಮಗ್ರಿಗಳನ್ನು ಜಲಾಶಯ ಬಳಿ ಇರಿಸಿದ್ದಾರೆ. ಗುಣಮಟ್ಟದ ಕಾಮಗಾರಿ ಮೂಲಕ ರೈತರ ಬಹುದಿನಗಳ ಕನಸು ಸಾಕಾರಗೊಳ್ಳಲಿ ಎಂಬುದೇ ಈ ಭಾಗದ ಜನರ ಆಶಯವಾಗಿದೆ.
"
ಐನಾಪುರ ಏತ ನೀರಾವರಿ ಯೋಜನೆ ಕಾಮಗಾರಿಗೆ ಸಜ್ಜಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ನೀರಾವರಿ ನಿಗಮದ ಅಧೀಕ ಅಭಿಯಂತರರು ಪತ್ರ ಬರೆದಿದ್ದರಿಂದ ಚಾಲನೆಗೆ ಸಮಯ ನಿಗದಿಪಡಿಸುವ ಹಂತದಲ್ಲಿದೆ.
— > ಅಮೃತ ಪವಾರ್ ಇಇ, ಕರ್ನಾಟಕ ನೀರಾವರಿ ನಿಗಮ ಕಲಬುರಗಿ
"
ಈ ಭಾಗದ ಬಹುದಿನಗಳ ಹೋರಾಟಕ್ಕೆ ನ್ಯಾಯ ಸಿಗುವ ಹಂತದಲ್ಲಿದೆ. ಎಲ್ಲ ಚುನಾಯಿತ ಪ್ರತಿನಿಧಿಗಳ ಸಹಕಾರ ಅಗತ್ಯವಿದ್ದು, ಶ್ರೀವೇ ಜಲಸಂಪನ್ಮೂಲ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ತಿಂಗಳಲ್ಲಿ ಐನಾಪುರ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡುವ ವಿಶ್ವಾಸವಿದೆ.
— > ಶಿವಾನಂದ ಮಾಲಿಪಾಟೀಲ್ ಸಂಸ್ಥಾಪಕ, ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ ಐನಾಪುರ