ಹಲವು ದಿನಗಳಿಂದ ಬಿಸಿಲ ತಾಪದಿಂದ ಕಂಗೆಟ್ಟಿದ್ದ ಕುದೂರು ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗಿದ್ದು, ಜನರಿಗೆ ಕೊಂಚ ನೆಮ್ಮದಿ ತಂದಿದೆ.
ಬೆಳಗ್ಗೆಯಿಂದಲೇ ಮೋಡ ಕಾಣಿಸಿಕೊಂಡಿದ್ದರಿಂದ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೆಲ ದಿನಗಳಿಂದ ಮಳೆ ಕೊರತೆ ಹಾಗೂ ಬಿಸಿಲಿನ ತೀವ್ರತೆಯಿಂದಾಗಿ ರೈತರು ಕೃಷಿಯ ಬಗ್ಗೆ ಆತಂಕದಲ್ಲಿದ್ದರು. ಇದೀಗ ಸಾಧಾರಣ ಮಳೆಯಾಗಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆ ಮತ್ತಷ್ಟು ಚುರುಕುಗೊಳಿಸಲು ಅನುಕೂಲವಾಗಲಿದೆ. ಬಿಸಿಲ ಬೇಗೆಯಿಂದಾಗಿ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದವರಿಗೆ ಮಳೆಯ ನಂತರದ ವಾತಾವರಣ ಕೊಂಚ ನೆಮ್ಮದಿ ನೀಡಿತು.
ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಿಂದಾಗಿ ಕೃಷಿ ಚಟುವಟಿಕೆಗಳತ್ತ ರೈತರ ಗಮನ ಹರಿದಿದೆ. ಜಮೀನುಗಳಲ್ಲಿ ತೇವಾಂಶ ಹೆಚ್ಚಾದರೆ ಬಿತ್ತನೆ ಸೇರಿ ವಿವಿಧ ಕೃಷಿ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದು ಬೀಚನಹಳ್ಳಿಯ ರೈತ ಅರುಣ್ ಕುಮಾರ್ ಹೇಳಿದರು.