ಜೀವಜಲ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಹರಿಬಿಟ್ಟಿರುವ ನೀರು ಕಲಬುರಗಿ ಜಿಲ್ಲೆಯ ಭೀಮಾ ನದಿಗೆ ಬರುತ್ತಿರುವುದು.
ನಾರಾಯಣಪುರದ ಬಸವಸಾಗರ ಜಲಾಶಯದಿಂದ ಹರಿಬಿಟ್ಟಿರುವ ನೀರು ಕಲಬುರಗಿ ಜಿಲ್ಲೆಯ ಭೀಮಾ ನದಿಗೆ ಬರುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಅಜಯಸಿಂಗ್​ ಹೇಳಿಕೆ
  • ಬಸವಸಾಗರದಿಂದ ಭೀಮೆಗೆ 1.20 ಟಿಎಂಸಿ ನೀರು ಬಿಡುಗಡೆ
ಕಲಬುರಗಿ: ಅಫಜಲಪುರ, ಜೇವರ್ಗಿ ಮತ್ತು ಯಡ್ರಾಮಿ ತಾಲೂಕುಗಳಲ್ಲಿ ಮಳೆ ಕೊರತೆಯಿಂದಾಗಿ ಮೂರ್ನಾಲ್ಕು ತಿಂಗಳಿಂದ ತಲೆದೋರಿದ ತೀವ್ರ ಕುಡಿಯುವ ನೀರಿನ ಅಭಾವ ನಿವಾರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಜನ ಮತ್ತು ಜಾನುವಾರುಗಳ ದಾಹ ತೀರಿಸಲು ನಾರಾಯಣಪುರದ ಬಸವಸಾಗರ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಲು ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಈ ಪ್ರಮುಖ ಬೇಡಿಕೆಗೆ ಸ್ಪಂದಿಸಿರುವುದಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಕಲಬುರಗಿ ವಿಭಾಗದ ಆಯುಕ್ತರು, ಡಿಸಿ ಹಾಗೂ ನಾರಾಯಣಪುರ ಜಲಾಶಯದ ಮುಖ್ಯ ಇಂಜಿನಿಯರ್​ಗಳಿಗೆ ಧನ್ಯವಾದ ಹೇಳಿರುವ ಶಾಸಕ ಡಾ.ಅಜಯಸಿಂಗ್​, ಈ ಮೂರೂ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಸದ್ಯದಲ್ಲೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿತ್ಯ 300 ಕ್ಯೂಸೆಕ್​ ಹರಿವು: ಕಲಬುರಗಿ ಡಿಸಿ ಪ್ರಸ್ತಾವನೆ ಹಾಗೂ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಅಭಿಯಂತರರ ತಾಂತ್ರಿಕ ಅಭಿಪ್ರಾಯ ವರದಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಬಸವಸಾಗರದಿಂದ ಇಂಡಿ ಶಾಖಾ ಕಾಲುವೆ ಎಸ್ಕೇಪ್​ 34.10 ಕಿಮೀ ಮತ್ತು 50.00 ಕಿಮೀ ಮೂಲಕ 1.20 ಟಿಎಂಸಿ ನೀರು ಶನಿವಾರದಿಂದ ನಿತ್ಯ 300 ಕ್ಯೂಸೆಕ್​ನಂತೆ ಭೀಮಾ ನದಿಗೆ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇತರ ಬಳಕೆಗೆ ನಿರ್ಬಂಧ
ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ ಈ ನೀರನ್ನು ಕೃಷಿ ಅಥವಾ ಕೈಗಾರಿಕೆ ಇತರ ಯಾವುದೇ ಉದ್ದೇಶಕ್ಕೆ ಬಳಸದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ನೀರಿನ ಸುರಕ್ಷಿತೆ ಹಾಗೂ ಸುಗಮ ಹರಿವಿಗಾಗಿ ನದಿಯುದ್ದಕ್ಕೂ ಸೂಕ್ತ ಪೊಲೀಸ್​ ಬಂದೋಬಸ್​ ಕಲ್ಪಿಸುವಂತೆ ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಎಸ್​ಪಿಗಳಿಗೆ ಸೂಚನೆ ನೀಡಲಾಗಿದೆ. ಕೆಬಿಜೆಎನ್ನೆಲ್​ ನಾರಾಯಣಪುರ ಹಾಗೂ ಭೀಮರಾಯನಗುಡಿ ಮುಖ್ಯ ಅಭಿಯಂತರರು ಸೇರಿ ಸಂಬಂಧಿತರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಲಾಗಿದೆ.
"

ಸಾರ್ವಜನಿಕ ಹಿತದೃಷ್ಟಿಯಿಂದ ಬಿಡುಗಡೆ ಮಾಡಿರುವ ಕುಡಿಯುವ ನೀರು ಎಲ್ಲೂ ಪೋಲಾಗದಂತೆ ಸುರಕ್ಷಿತವಾಗಿ ಗೊತ್ತುಪಡಿಸಿದ ಸ್ಥಳಕ್ಕೆ ತಲುಪುವಂತೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಲು ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

— > ಡಾ.ಅಜಯಸಿಂಗ್​ ಜೇವರ್ಗಿ ಶಾಸಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net