ಬೆಂಗಳೂರು: ಉಪಾಸನಾ ಟ್ರಸ್ಟ್ ವತಿಯಿಂದ 2026ನೇ ಸಾಲಿನ ಪ್ರಶಸ್ತಿಗಳು ಪ್ರಕಟವಾಗಿದ್ದು, ಗಾಯಕ ದಿ. ಜಿ.ವಿ. ಅತ್ರಿ ನೆನಪಿನ ‘ಉಪಾಸನಾ ಪ್ರಶಸ್ತಿ’ಗೆ ಗಾಯಕಿ ಚಾಂದಿನಿ ಗರ್ತಿಕೆರೆ ಹಾಗೂ ಕೊಳಲು ವಾದಕ ದಿ. ಎನ್.ಎಸ್. ಮುರಳಿ ನೆನಪಿನ ‘ನಾದೋಪಾನಾ ಪ್ರಶಸ್ತಿ’ ಗೆ ರಿದಂಪ್ಯಾಡ್ಸ್ ವಾದಕ ವಿನಯ್ ರಂಗದೋಳ್ ಆಯ್ಕೆಯಾಗಿದ್ದಾರೆ.
ನಗರದ ಎನ್.ಆರ್. ಕಾಲೋನಿಯ ಪತ್ತಿ ಸಭಾಂಗಣದಲ್ಲಿ ಜು. 7ರಂದು ಸಂಜೆ 6 ಗಂಟೆಗೆ ನಡೆಯಲಿರುವ ಉಪಾಸನಾ ಟ್ರಸ್ಟ್‌ನ 27ನೇ ವಾಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ವೇಳೆ ಕವಿಗಳಾದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್.ವೆಂಕಟೇಶಮೂರ್ತಿ ಹಾಗೂ ಬಿ.ಆರ್.ಲಕ್ಷ್ಮಣ ರಾವ್ ಕುರಿತ ತ್ರಿಮೂರ್ತಿಗಳ ಕಾವ್ಯ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಸುಗಮ ಸಂಗೀತ ಗಾಯಕ ಗರ್ತಿಕೆರೆ ರಾಘಣ್ಣ ಉದ್ಘಾಟಿಸಿದ್ದಾರೆ. ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ. ಪ್ರಸಾದ್, ಕವಿ ಬಿ.ಆರ್. ಲಕ್ಷ್ಮಣರಾವ್, ಉಪಾಸನಾ ಟ್ರಸ್ಟ್‌ನ ಗೌರವಾಧ್ಯಕ್ಷೆ ವಿ.ಎಸ್. ಭಾಗ್ಯಲಕ್ಷ್ಮೀ , ಗಾಯಕ ಉಪಾಸನಾ ಮೋಹನ್ ಇತರರು ಭಾಗವಹಿಸಲಿದ್ದಾರೆ.