ಮೊಳಕೆಯೊಡೆಯದ ಸೋಯಾಬಿನ್​ ಬೀಜ

ಕಮಲನಗರ ತಾಲೂಕಿನ ಖೇಡ್​ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ (ಕೆಎಸ್​ಎಸ್​ಇ) ಬೀದರ್​ನಿಂದ ಡಿಎಸ್​ಬಿ-34 ತಳಿಯ ಮೊಳಕೆಯೊಡೆಯದ ಸೋಯಾಬಿನ್​ ಬೆಳೆಯನ್ನು ಈಚೆಗೆ ಕೆಎಸ್​ಎಸ್​ಇ ಅಧಿಕಾರಿಗಳ ತಂಡ ಕ್ಷೇತ್ರ ವೀಕ್ಷಣೆ ಮಾಡಿರುವುದು.
ಕಮಲನಗರ ತಾಲೂಕಿನ ಖೇಡ್​ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ (ಕೆಎಸ್​ಎಸ್​ಇ) ಬೀದರ್​ನಿಂದ ಡಿಎಸ್​ಬಿ-34 ತಳಿಯ ಮೊಳಕೆಯೊಡೆಯದ ಸೋಯಾಬಿನ್​ ಬೆಳೆಯನ್ನು ಈಚೆಗೆ ಕೆಎಸ್​ಎಸ್​ಇ ಅಧಿಕಾರಿಗಳ ತಂಡ ಕ್ಷೇತ್ರ ವೀಕ್ಷಣೆ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಂಗಾಲಾದ ಖೇಡ್​ ಅನ್ನದಾತರು
  • ಕಳಪೆ ಬೀಜ ವಿತರಣೆ ಆರೋಪ
  • ರೈತರಿಂದ ಪ್ರತಿಭಟನೆ ಎಚ್ಚರಿಕೆ
ಕಮಲನಗರ: ಸೋಯಾಬಿನ್​ ಬೀಜ ಬಿತ್ತನೆ ಮಾಡಿ ವಾರಗಳೇ ಕಳೆದರೂ ಮೊಳಕೆಯೊಡೆಯದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ತಾಲೂಕಿನ ಖೇಡ್​ ಗ್ರಾಮದಲ್ಲಿ ಸುಮಾರು 47 ಎಕರೆ ಪ್ರದೇಶದಲ್ಲಿ ಸೋಯಾ ಬಿತ್ತನೆ ಮಾಡಿರುವ ರೈತರು, ಮೊಳಕೆ ಒಡೆಯದ ಬೀಜದಿಂದಾಗಿ ಚಿಂತಾಕ್ರಾಂತರಾಗಿದ್ದು, ಕಳಪೆ ಬೀಜ ವಿತರಣೆಯೇ ಪ್ರಮುಖ ಕಾರಣ ಎನ್ನುವ ದೂರುಗಳು ಕೇಳಿ ಬಂದಿವೆ.
ಉತ್ತಮ ಇಳುವರಿ ನಿರೀಕ್ಷೆಯಿಂದ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ (ಕೆಎಸ್​ಎಸ್​ಇ) ಬೀದರ್​ನಿಂದ ಡಿಎಸ್​ಬಿ-34 ತಳಿಯ ಸೋಯಾಬಿನ್​ ಬೀಜಗಳನ್ನು ತಂದು ಬಿತ್ತನೆ ಮಾಡಿದ್ದೇವೆ. ಆದರೆ 15 ದಿನಗಳಾದರೂ ಮೊಳಕೆಯೊಡೆದಿಲ್ಲ. ಇದರಿಂದ ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂದು ರೈತ ಧನರಾಜ ದಾನಾ ಅಳಲು ತೋಡಿಕೊಂಡಿದ್ದಾರೆ.
ಮೊಳಕೆಯೊಡೆಯದ ಸೋಯಾ ಬೀಜದ ಕುರಿತು ಬೀಜ ನಿಗಮದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅವರು ಬಂದು ನಮ್ಮ ಹೊಲಗಳಿಗೆ ಭೇಟಿ ನೀಡಿ ಹೋಗಿದ್ದಾರೆ. ಆದರೆ ಇಲ್ಲಿಯವರೆಗೆ ಹೊಸ ಬೀಜ ವಿತರಣೆ ಮಾಡಿಲ್ಲ. ಯಾವುದೇ ಪರಿಹಾರದ ಕ್ರಮ ಕೈಗೊಂಡಿಲ್ಲ ಎಂದು ರೈತ ಸೂರ್ಯಕಾಂತ ಬಚ್ಚಣ್ಣ ದೂರಿದರು.
ಸುಮಾರು 47 ಎಕರೆ ಹೊಲದಲಿ ಸೋಯಾಬಿನ್​ ಬೀಜ ಬಿತ್ತನೆ ಮಾಡಿ 15 ದಿನಗಳಾದರೂ ಮೊಳಕೆ ಬಂದಿಲ್ಲ. ಬೀಜದ ವೆಚ್ಚ, ರಸಗೊಬ್ಬರ, ಟ್ರಾಕ್ಟರ್​ ಬಾಡಿಗೆ ಹಣ ವ್ಯರ್ಥವಾಗಿದೆ. ಸರ್ಕಾರ ನಮ್ಮ ನೋವು ಅರ್ಥ ಮಾಡಿಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
"

ಈಗಾಗಲೇ ಸೋಯಾಬಿನ್​ ಬೀಜ ಬಿತ್ತಿದ ರೈತರು ನಷ್ಟ ಹೊಂದಿದ್ದಾರೆ. ಅಧಿಕಾರಿಗಳು ರೈತರ ಸಮಸ್ಯೆ ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡಿ ಪ್ರತಿಭಟಿಸಲಾಗುವುದು.

— > ಮಲ್ಲಿಕಾರ್ಜುನ ದಾನಾ, ತಾಪಂ ಮಾಜಿ ಸದಸ್ಯ
"

ಮುಂಗಾರು ಹಂಗಾಮು 2026 ನೇ ಸಾಲಿನಲ್ಲಿ ವಿತರಣೆಯಾಗಿರುವ ಸೋಯಾಬಿನ್​ ಪ್ರಮಾಣಿತ ಬೀಜದಲ್ಲಿ ಮೊಳಕೆ ಪ್ರಮಾಣ ಕಡಿಮೆ ಬಂದಿರುವ ಖೇಡ್​ ಗ್ರಾಮದ ರೈತರ ಹೊಲಗಳಿಗೆ ತುರ್ತಾಗಿ ಕೆವಿಕೆ ವಿಜ್ಞಾನಿಗಳಗಳನ್ನು ಕ್ಷೇತ್ರ ನಿರೀಕ್ಷಣೆ ಕೈಗೊಳ್ಳಲು ರಾಯಚೂರ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಿಗೆ ಕೋರಿದ್ದೇನೆ.

— > ಸಂಜೀವಕುಮಾರ ಹುಲ್ಲಾಳಿ, ಸಹಾಯಕ ವ್ಯವಸ್ಥಾಪಕ, ಕೆಎಸ್​ಎಸ್​ಸಿ ಬೀದರ್​



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net