ಸೌಹಾರ್ದ ಕೂಟಗಳಿಂದ ಏಕತೆ ವೃದ್ಧಿ

ಯಾದಗಿರಿಯಲ್ಲಿ ಭಾನುವಾರ ಜಮಾಅತೆ ಇಸ್ಲಾಮಿ ಹಿಂದ್​ ಆಯೋಜಿಸಿದ್ದ ಈದ್​ ಸೌಹಾರ್ದ ಕೂಟದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಮಾತನಾಡಿದರು. ಗುರುಮಠಕಲ್​ ಖಾಸಾಮಠ ಶ್ರೀ, ಚನ್ನಪ್ಪಗೌಡ ಮೊಸಂಬಿ, ಮರೆಪ್ಪ ಚಟ್ಟೇರಕರ್​, ಅಜೀಜ್​ ಶಹನ್​ ಇತರರಿದ್ದರು.
ಯಾದಗಿರಿಯಲ್ಲಿ ಭಾನುವಾರ ಜಮಾಅತೆ ಇಸ್ಲಾಮಿ ಹಿಂದ್​ ಆಯೋಜಿಸಿದ್ದ ಈದ್​ ಸೌಹಾರ್ದ ಕೂಟದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಮಾತನಾಡಿದರು. ಗುರುಮಠಕಲ್​ ಖಾಸಾಮಠ ಶ್ರೀ, ಚನ್ನಪ್ಪಗೌಡ ಮೊಸಂಬಿ, ಮರೆಪ್ಪ ಚಟ್ಟೇರಕರ್​, ಅಜೀಜ್​ ಶಹನ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಅಭಿಮತ
  • ಯಾದಗಿರಿಯಲ್ಲಿ ಈದ್​ ಕಾರ್ಯಕ್ರಮ
ಯಾದಗಿರಿ: ಈದ್​ ಸೌಹಾರ್ದ ಕೂಟಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಏಕತೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ನಗರದ ಸೌದಾಗರ್​ ಫಂನ್​ ಹಾಲ್​ನಲ್ಲಿ ಭಾನುವಾರ ಜಮಾಅತೆ ಇಸ್ಲಾಮಿ ಹಿಂದ್​ ಆಯೋಜಿಸಿದ್ದ ಈದ್​ ಸೌಹಾರ್ದ ಕೂಟದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಜಾತಿ ಧರ್ಮದ ಭೇದ ನಿವಾರಿಸಿ ಎಲ್ಲರೂ ಒಂದೇ ಎಂಬ ಮನೋಭಾವ ಬೆಳೆಸುತ್ತವೆ. ಈದ್​ ಹಬ್ಬದ ಸಂದೇಶವಾದ ಪ್ರೀತಿ, ಸಹನೆ ಮತ್ತು ಸಹಕಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್​ ಖಾಸಾಮಠದ ಶ್ರೀ ಶಾಂತವೀರ ಗುರು ಮುರರಾಜೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮಗಳಿಗಿಂತ ಮಾನವೀಯತೆ ಮಹತ್ವದ್ದು. ವರ್ಷದುದ್ದಕ್ಕೂ ವಿವಿಧ ಧರ್ಮದ ಹಬ್ಬಗಳನ್ನು ಆಚರಿಸುತ್ತೇವೆ. ಆದರೆ ಇಂತಹ ಸೌಹಾರ್ದ ಕೂಟಗಳಂತಹ ಕಾರ್ಯಕ್ರಮಗಳು ಒಗ್ಗಟ್ಟು ಬೆಳೆಸುವಲ್ಲಿ ವಿಶೇಷ ಪಾತ್ರ ವಹಿಸುತ್ತವೆ ಎಂದು ನುಡಿದರು.
ಧರ್ಮಗಳು ಹುಟ್ಟುವ ಮೊದಲು ನಾವೆಲ್ಲರೂ ಮಾನವರಾಗಿದ್ದೆವು. ಧರ್ಮಗಳು ಉದಯಿಸಿದ ನಂತರವೇ ವಿಭಿನ್ನ ಜಾತಿ, ಮತಗಳಾಗಿ ವಿಭಜನೆಯಾಗಿದ್ದೇವೆ. ಆದರೂ ನಾವು ಮೊದಲು ಮನುಷ್ಯರು ಎಂಬ ಸತ್ಯವನ್ನು ಅರಿತುಕೊಂಡು ನಡೆದರೆ ಶಾಂತಿ ನೆಲೆಸಲಿದೆ ಎಂದರು.
ಉಪನ್ಯಾಸ ನೀಡಿದ ಜಿಶಾನ್​ ಅಖಿಲ್​ ಸಿದ್ದಿಖಿ ಅವರು, ಧರ್ಮ ಬೇರೆ ಬೇರೆ ಇದ್ದರೂ ಮಾನವೀಯ ಮೌಲ್ಯಗಳು ಒಂದೇ. ಸಮಾಜದಲ್ಲಿ ಸೌಹಾರ್ದತೆ ಕಾಪಾಡಲು ಪರಸ್ಪರ ಗೌರವ, ಸಹನೆ ಹಾಗೂ ಸಹಕಾರ ಬಹಳ ಮುಖ್ಯವಾಗಿದೆ. ಇಂತಹ ಸೌಹಾರ್ದ ಕೂಟಗಳು ಜನರ ನಡುವೆ ಸ್ನೇಹ ಮತ್ತು ಒಗ್ಗಟ್ಟು ಹೆಚ್ಚಿಸುತ್ತವೆ ಎಂದು ಹೇಳಿದರು.
ಅಮ್ಜದ್​ ಹುಸೇನ್​ ಅಧ್ಯತೆ ವಹಿಸಿದ್ದರು. ಗುಲಾಂ ಸಮಾದಾನಿ ಮೂಸಾ, ಮರೆಪ್ಪ ಚಟ್ಟೇರಕರ್​, ಮಲ್ಲಣ್ಣ ದಾಸನಕೇರಿ, ಗುಂಡಪ್ಪ ಕಲಬುರಗಿ, ಡಾ.ಭಗವಂತ ಅನವಾರ್​, ವಿಶ್ವನಾಥ ಶಿರವಾರ, ಚನ್ನಪ್ಪಗೌಡ ಮೊಸಂಬಿ, ನಗರಸಭೆ ಮಾಜಿ ಅಧ್ಯ ಅಜೀಜ್​ ಶಹನ್​, ಜಮಾಅತೆ ಇಸ್ಲಾಮಿ ಹಿಂದ್​ ಸ್ಥಾನಿಯ ಅಧ್ಯ ಸಲಾಹುದ್ದಿನ್​ ಜಾಗಿರ್ದಾರ್​, ಭಾಷುಮಿಯಾ ವಡಿಗೇರಾ ಇತರರಿದ್ದರು. ಮೊಹಮ್ಮದ್​ ಅತಿಫ್​ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net