ಕುಂಚಾವರಂ ಬಸ್​ ನಿಲ್ದಾಣದಲ್ಲಿ ಅನಧಿಕೃತ ಅಂಗಡಿ ದರ್ಬಾರ್​

ಚಿಂಚೋಳಿ ತಾಲೂಕಿನ ಕುಂಚಾವರಂ ಬಸ್​ ನಿಲ್ದಾಣದ ಮುಂಭಾಗದಲ್ಲಿ ಅನಧಿಕೃತವಾಗಿ ಹೋಟೆಲ್​, ಗ್ಯಾರೇಜ್​ಗಳನ್ನು ನಡೆಸುತ್ತಿರುವುದು.
ಚಿಂಚೋಳಿ ತಾಲೂಕಿನ ಕುಂಚಾವರಂ ಬಸ್​ ನಿಲ್ದಾಣದ ಮುಂಭಾಗದಲ್ಲಿ ಅನಧಿಕೃತವಾಗಿ ಹೋಟೆಲ್​, ಗ್ಯಾರೇಜ್​ಗಳನ್ನು ನಡೆಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮುಂಭಾಗದಲ್ಲಿ ತಲೆ ಎತ್ತಿರುವ ಶಾಪ್​ಗಳು
  • ಅಧಿಕಾರಿಗಳ ಸೂಚನೆಗೆ ಕ್ಯಾರೆ ಎನ್ನದ ವ್ಯಾಪಾರಿಗಳು
ಶಿವರಾಜ ವಾಲಿ ಚಿಂಚೋಳಿ
ಗಡಿ ಪ್ರದೇಶದ ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಕುಂಚಾವರಂ ಬಸ್​ ನಿಲ್ದಾಣದ ಎದುರಲ್ಲಿ ಅನಧಿಕೃತ ಅಂಗಡಿಗಳು ತಲೆಎತ್ತಿದ್ದು, ತಂಗುದಾಣವೇ ಕಾಣದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ಹಾಗೂ ತೆಲಂಗಾಣ ಗಡಿ ಭಾಗದ ಪ್ರಯಾಣಿಕರಿಗೆ ಕುಂಚಾವರಂ ಬಸ್​ ನಿಲ್ದಾಣವೇ ಆಧಾರವಾಗಿದೆ. ಆದರೆ ನಿಲ್ದಾಣದ ಪರಿಸರದಲ್ಲಿ ಅಕ್ರಮ ಅಂಗಡಿಗಳು ಹಾಕಿದ್ದರಿಂದ ಬಸ್​ ನಿಲ್ದಾಣ ಎಲ್ಲಿದೆ ಎಂದು ಹುಡುಕಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಬಸ್​ ನಿಲ್ದಾಣದ ಮುಂಭಾಗದ ಜಾಗವನ್ನು ಅತಿಕ್ರಮಿಸಿಕೊಂಡು ಡಬ್ಬಾ, ಹೋಟೆಲ್​ ಹಾಗೂ ಅಂಗಡಿಗಳನ್ನು ನಿರ್ಮಿಸಿದ್ದಾರೆ. ಇದರಿಂದ ನಿಲ್ದಾಣದ ಒಳಗೆ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ತೊಂದರೆ ಅನುಭವಿಸುವಂತಾಗಿದೆ.
ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಆಡಳಿತಕ್ಕೆ ಹಲವು ಬಾರಿ ಲಿಖಿತ ಹಾಗೂ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಸ್​ ಟಕದ ನಿರ್ವಾಹಕರು ಅಳಲು ತೋಡಿಕೊಂಡಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಬಸ್​ ನಿಲ್ದಾಣ ಆವರಣದಲ್ಲಿನ ಅನಧಿಕೃತ ಶಾಪ್​ಗಳನ್ನು ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.
"

ಈಗಾಗಲೇ ಬಸ್​ ನಿಲ್ದಾಣದ ನಿರ್ವಾಹಕರು ಗ್ರಾಮ ಪಂಚಾಯಿತಿಗೆ ಒತ್ತುವರಿ ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದು,ಇದೀಗ ತಾಲೂಕು ಆಡಳಿತಕ್ಕೆ ಹಾಗೂ ಉನ್ನತ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ ಗಮನಕ್ಕೆ ತರಲಾಗುವುದು. ಶೀಘ್ರವೇ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಕುಂಚಾವರಂ ಬಸ್​ ನಿಲ್ದಾಣದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸಲಾಗುವುದು.

— > ಸುರೇಶ ತೇಗಲತಿಪ್ಪಿ, ವ್ಯವಸ್ಥಾಪಕ, ಸಾರಿಗೆ ಘಟಕ, ಚಿಂಚೋಳಿ
"

ಕುಂಚಾವರಂ ಬಸ್​ ನಿಲ್ದಾಣ ಆವರಣದಲ್ಲಿನ ಅನಧಿಕೃತ ಅಂಗಡಿಗಳ ತೆರವಿಗೆ ನಿರ್ವಾಹಕರು ಎರಡು ಬಾರಿ ಮನವಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ನಾವು ಮೌಖಿಕವಾಗಿ ಅಂಗಡಿ ತೆಗೆಯುವಂತೆ ಸೂಚಿಸಿದ್ದೇವೆ. ಈವರೆಗೂ ಯಾವುದೇ ಲಿಖಿತ ನೋಟಿಸ್​ ಜಾರಿಮಾಡಿಲ್ಲ.

— > ರಾಮಕೃಷ್ಣ ಹಡಪದ, ಪಿಡಿಒ, ಕುಂಚಾವರಂ ಗ್ರಾಪಂ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net