ಸದ್ಯ ರಾಜ್ಯಕ್ಕೆ ಪ್ರತಿ ವರ್ಷ 38 ಟಿಎಂಸಿ ನೀರು ನಷ್ಟವಾಗುತ್ತಿದೆ. ರಾಯಚೂರು ಭಾಗದ (ಮೈಲ್ 47ರಿಂದ 141ವರೆಗೆ) 2 ಲಕ್ಷ ಎಕರೆ ಪ್ರದೇಶಕ್ಕೆ ನೀರು ಸರಿಯಾಗಿ ತಲುಪುತ್ತಿಲ್ಲ. 2013ರಲ್ಲೇ ಯೋಜಿಸಿದಂತೆ ಜಲಾಶಯದ ಹೂಳು ತೆರವಿಗೆ 65 ಸಾವಿರ ಎಕರೆ ಜಾಗ ಬೇಕಿದ್ದು, ಪ್ರತಿ ಟಿಎಂಸಿಗೆ 380 ಕೋಟಿ ರೂ.ನಂತೆ 12,500 ಕೋಟಿ ರೂ. ಅನುದಾನ ಅವಶ್ಯವೆಂದು ಅಧಿಕಾರಿಗಳು ಅಂದಾಜಿಸಿದ್ದರು. ಯೋಜನೆ ಕೈಬಿಟ್ಟ ರಾಜ್ಯ ಸರ್ಕಾರ ಪರ್ಯಾಯವಾಗಿ ಫ್ಲಡ್ಫ್ಲೋ ಕಾಲುವೆ ಮೂಲಕ ನವಲಿ ಬಳಿ 30.02 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆ ರೂಪಿಸಿದೆ. ಹಿನ್ನೀರು ಭಾಗದ ಹಿರೇಬಗನಾಳ ಬಳಿಯಿಂದ ನವಲಿವರೆಗೆ 38 ಕಿ.ಮೀ. ಕಾಲುವೆ ಮೂಲಕ ಹೊಸ ಜಲಾಶಯಕ್ಕೆ ನೀರು ಸೇರಿಸಬೇಕು. ಅಲ್ಲಿಂದ ಮುಂದೆ 8 ಕಿ.ಮೀ. ಕಾಲುವೆ ಮೂಲಕ ತುಂಗಭದ್ರಾ ಎಡದಂಡೆ ಕಾಲುವೆಯ 45ನೇ ಮೈಲ್ಗೆ ಕೂಡಿಸಿದಲ್ಲಿ ಕಡೆಭಾಗದ ರೈತರಿಗೆ ಆಗುತ್ತಿರುವ ನೀರಿನ ಕೊರತೆ ನೀಗಿಸಬಹುದೆಂದು ಲೆಕ್ಕ ಹಾಕಲಾಗಿದೆ. 2013ರಲ್ಲಿ ಯೋಜಿಸಿದಂತೆ ಹೊಸ ಡ್ಯಾಂ ಕಟ್ಟಲು 6,000 ಕೋಟಿ ರೂ. ವೆಚ್ಚ ತಗುಲಲಿದ್ದು, 17,900 ಎಕರೆ ಭೂಮಿ ಬೇಕು. 12 ಗ್ರಾಮಗಳು ಮುಳುಗಡೆಯಾಗಲಿದ್ದು, 6,500 ಜನರನ್ನು ಬೇರೆಡೆ ಸ್ಥಳಾಂತರಿಸಬೇಕೆನ್ನಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಡಿಪಿಆರ್ ಮಾಡಿಸಿದ್ದು ವಿವರಗಳು ಬಹಿರಂಗವಾಗಿಲ್ಲ. ಆದರೆ ಈಗ ನೂತನ ಮುಖ್ಯಮಂತ್ರಿಯವರ ಸಾರಥ್ಯದಲ್ಲಿ ಹೊಸ ಪ್ರಯತ್ನ ಆರಂಭವಾಗಿದೆ.