ತಲಸ್ಸೇಮಿಯಾ ಪೀಡಿತರಿಗೆ ಚಿಕಿತ್ಸೆ ಮತ್ತು ನೆರವು

DKMS
DKMS
Published on

ಪ್ರಮುಖ ಮುಖ್ಯಾಂಶಗಳು

  • * ಡಿಕೆಎಂಎಸ್‌ನಿಂದ ಘೋಷಣೆ
  • * ಸಂಸ್ಥೆ ನೆರವಿನಿಂದ ಬಾಲಕಿಗೆ ಹೊಸ ಬದುಕು
ಬೆಂಗಳೂರು: ತಲಸ್ಸೇಮಿಯಾ ಪೀಡಿತ ಮಕ್ಕಳಿಗಾಗಿ ಡಿಕೆಎಂಎಸ್ ಫೌಂಡೇಶನ್ ಇಂಡಿಯಾ ಉಚಿತ ಎಚ್‌ಎಲ್‌ಎ ಟೈಪಿಂಗ್ ಪರೀಕ್ಷೆ ಸೌಲಭ್ಯ ಹಾಗೂ ಡಿಕೆಎಂಎಸ್ ರೋಗಿ ನಿಧಿ ಅಡಿಯಲ್ಲಿ ಕಾಂಡಕೋಶ ಕಸಿಗೆ ಭಾಗಶಃ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ ಅಧ್ಯಕ್ಷೆ ಪ್ಯಾಟ್ರಿಕ್ ಪಾಲ್ ಮಾತನಾಡಿ,
ಭಾರತದಲ್ಲಿ ಕಡಿಮೆ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ರೋಗಿಗಳು ಹಲವು ರೀತಿಯ ರಕ್ತದ ಕಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ದುಬಾರಿ ಆಗಿದ್ದು, ಚಿಕಿತ್ಸೆಯ ಆಯ್ಕೆಗಳು, ಮಾರ್ಗದರ್ಶನ, ಆರ್ಥಿಕ ಬೆಂಬಲ ಸೇರಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ಅಂತಹವರಿಗಾಗಿ ‘ಡಿಕೆಎಂಎಸ್ ಆಕ್ಸೆಸ್ ಟು ಟ್ರಾನ್ಸ್‌ಪ್ಲಾಂಟ್’ ಕಾರ್ಯಕ್ರಮವು ಈ ಅಡೆತಡೆಗಳನ್ನು ನಿವಾರಿಸಿ ಜೀವ ಉಳಿಸುವ ಚಿಕಿತ್ಸೆ ಒದಗಿಸುವ ಗುರಿ ಹೊಂದಿದೆ. ಇದರ ಮೂಲಕ ಹಲವು ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗಿದ್ದು, ಮರುಜೀವ ಪಡೆದುಕೊಂಡಿದ್ದಾರೆ ಎಂದರು.
ಡಿಕೆಎಂಎಸ್ ಸಮೂಹದ ಜಾಗತಿಕ ಸಿಇಒ ಡಾ. ಎಲ್ಕೆ ನುಜಾರ್, ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಫಿಸಿಶಿಯನ್ ಡಾ. ಸಿದ್ಧೇಶ್ ಕಲಾಂತ್ರಿ ಹಾಜರಿದ್ದರು.

ನಾಸಿಕ್ ಬಾಲಕಿಗೆ ಯಶಸ್ವಿ ಚಿಕಿತ್ಸೆ:ಮಹಾರಾಷ್ಟ್ರದ ನಾಸಿಕ್ ಮೂಲದ ರಿತೇಶ್ ಮತ್ತು ನೀತಾ ದಂಪತಿಯ ಮಗಳು ಸಮೀಕ್ಷಾ ಬೀಟಾ ತಲಸೀಮಿಯಾದಿಂದ ಬಳಲುತ್ತಿದ್ದು, ಹಲವು ವರ್ಷಗಳ ಕಾಲ ರಕ್ತ ವರ್ಗಾವಣೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇದರಿಂದ ಬಾಲಕಿ ದೈಹಿಕ ಹಾಗೂ ಮಾನಸಿಕವಾಗಿಯೂ ಜರ್ಜರಿತಳಾಗಿದ್ದಳು. ಸಮೀಕ್ಷಾಳ ಪೋಷಕರು ಡಾ. ಸಿದ್ಧೇಶ್ ಕಲಾಂತ್ರಿ ಅವರನ್ನು ಸಂಪರ್ಕಿಸಿದಾಗಿ ಕಾಂಡಕೋಶ ವರ್ಗಾವಣೆಯ ಬಗ್ಗೆ ಮಾಹಿತಿ ಪಡೆದರು. ಆದರೆ ಬಾಲಕಿಗೆ ಕುಟುಂಬದವರ ಕಾಂಡಕೋಶ ಹೊಂದಾಣಿಕೆ ಆಗಲಿಲ್ಲ. ಆಗ ನೆರವಿಗೆ ಬಂದಿದ್ದೆ ಡಿಕೆಎಂಎಸ್. ಈ ವೇದಿಕೆಯಲ್ಲಿ ಕಾಂಡಕೋಶಕ್ಕೆ ಹೆಸರು ನೋಂದಾಯಿಸಿದ್ದ ಕೋಲಾರ ಮೂಲದ ಕೆ.ದಿಲೀಪ್ ಅವರ ಕಾಂಡಕೋಶ ಬಾಲಕಿಗೆ ಹೊಂದಾಣಿಕೆಯಾಯಿತು. 2023ರಲ್ಲಿ ದಾನಿಯಿಂದ ಕಾಂಡಕೋಶ ಪಡೆದು ಬಾಲಕಿಗೆ ಕಸಿ ಮಾಡಲಾಯಿತು. ಈಗ ಸಮೀಕ್ಷಾ ಗುಣ ಹೊಂದಿದ್ದು ಆರೋಗ್ಯವಾಗಿದ್ದಾಳೆ. ಪದೇ ಪದೆ ರಕ್ತ ವರ್ಗಾವಣೆ ಮಾಡಿಸಿಕೊಳ್ಳುವುದರಿಂದ ಮುಕ್ತಳಾಗಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net