ಜೈಲಿನಿಂದ ಮೂವರು ಕೈದಿಗಳು ಪರಾರಿ ಪ್ರಕರಣ; ಓರ್ವ ಕೈದಿ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ ಕಲಬುರಗಿ ಪೊಲೀಸರು | prisoners escape

ಸಂತೋಷ ಮೇತ್ರೆ
ಸಂತೋಷ ಮೇತ್ರೆ
Published on
ಕಲಬುರಗಿ: ನಗರದ ಕೇಂದ್ರ ಕಾರಗೃಹದಿಂದ ಪರಾರಿಯಾಗಿದ್ದ ಮೂವರು ಸಜಾ ಕೈದಿಗಳ ಪೈಕಿ ಓರ್ವನನ್ನು ಬುಧವಾರ(ಜು. 15) ಮುಂಜಾನೆ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು, ಬಂಧಿಸುವ ವೇಳೆ ಕೈದಿ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಕೈದಿ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ. 
ಸಂತೋಷ ಮೇತ್ರೆ ಮೇಲೆ ಫೈರಿಂಗ್ ಮಾಡಲಾಗಿದೆ. ಪರಾರಿಯಾಗಿದ್ದ ಮೂವರು ಕೈದಿಗಳಲ್ಲಿ ಒಬ್ಬನಾಗಿದ್ದನು. ಪ್ರಸ್ತುತ ಆತನನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ, ಕೇಂದ್ರ ಕಾರಗೃಹದಿಂದ ಪರಾರಿಯಾದ ಮೂವರು ಶಿಕ್ಷಿತ ಕೈದಿಗಳು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ಬೆಳಗ್ಗೆ ಹುಮನಾಬಾದ್ ರಿಂಗ್ ರಸ್ತೆ ಕೈಗಾರಿಕಾ ಪ್ರದೇಶದ ಬಳಿ ಪರಾರಿಯಾಗಿದ್ದ ಒಬ್ಬ ಕೈದಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು.
ತಕ್ಷಣ ಸ್ಥಳಕ್ಕೆ ತೆರಳಿದ ವಿಶೇಷ ತಂಡ ಕೈದಿಯನ್ನು ಪತ್ತೆಹಚ್ಚಿ ಶರಣಾಗುವಂತೆ ಸೂಚಿಸಿತ್ತು. ಆದರೆ, ಶರಣಾಗಲು ನಿರಾಕರಿಸಿದ ಕೈದಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಪರಾರಿಯಾಗಲು ಮುಂದಾಗಿದ್ದ. ಈ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಹಾಗೂ ಆತ್ಮರಕ್ಷಣೆಗಾಗಿ ಪೊಲೀಸರು ಕೈದಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಗಾಯಗೊಂಡ ಕೈದಿಯನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಬಂಧಿತ ಕೈದಿ ಔರಾದ್ ತಾಲೂಕಿನ ಸಂತಪುರ ಗ್ರಾಮದವನು ಎನ್ನಲಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದನು ಎಂದು ತಿಳಿದು ಬಂದಿದೆ. ಇನ್ನೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೈದಿ ಮೇಲೆ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. 
ಜುಲೈ 13ರ ಮಧ್ಯರಾತ್ರಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ಜೈಲಿನ ಭದ್ರತಾ ಗೋಡೆ ಹಾರಿ ಪರಾರಿಯಾಗಿದ್ದರು. ಈ ಘಟನೆ ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಉಳಿದ ಇಬ್ಬರು ಪರಾರಿಯಾಗಿರುವ ಕೈದಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net