E20 ಪೆಟ್ರೋಲ್​ ಬಗ್ಗೆ ತಪ್ಪು ಮಾಹಿತಿ ಮತ್ತು ನಿತಿನ್ ಗಡ್ಕರಿ ಹೆಸರಿಗೆ ಧಕ್ಕೆ ಆರೋಪ; ನಾಲ್ವರು ಇನ್‌ಫ್ಲೂವೆನ್ಸರ್‌ ವಿರುದ್ಧ ಎಫ್​ಐಆರ್ | FIR

ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ
Published on
ಮುಂಬೈ: E20 ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಾನಹಾನಿ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಮನೀಶ್ ಕಶ್ಯಪ್ ಸೇರಿದಂತೆ ನಾಲ್ವರು ಇನ್​ಸ್ಟಾಗ್ರಾಂ ಇನ್‌ಫ್ಲೂವೆನ್ಸರ್‌ಗಳ ವಿರುದ್ಧ ಮಂಗಳವಾರ(ಜು. 14) ಎಫ್​ಐಆರ್(FIR) ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಆಗಿರುವ ಮನೀಶ್ ಕಶ್ಯಪ್, ದೇಸಿ ಬಾಯ್ಸ್‌ಎನ್‌ಸಿಆರ್, ಹರ್ಷಿತ್ ರಥಿ ಮತ್ತು ಅಂಕಲೇಶ್ ಇನ್ವಾಟೆ ಅವರ ವಿರುದ್ಧ ನಾಗ್ಪುರ ಸೈಬರ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಕಾರ ಈ ನಾಲ್ವರು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಮಾಹಿತಿ ಮತ್ತು ಯಾವುದೇ ನಿರ್ದಿಷ್ಟ ಆಧಾರವಿಲ್ಲದೆ ಗಡ್ಕರಿ ಅವರ ಹೆಸರನ್ನು ಎಳೆದು ತರುವ ಮೂಲಕ ಅವರ ಪ್ರತಿಷ್ಠೆಗೆ ಕಳಂಕ ತಂದ ಆರೋಪ ಹೊರಿಸಲಾಗಿದೆ.
ಇನ್ನೂ ವಿಡಿಯೋಗಳಲ್ಲಿ ಎಥೆನಾಲ್ ಬಳಕೆಯಿಂದ ದೊಡ್ಡ ಪ್ರಮಾಣದ ವಂಚನೆ ಮತ್ತು ನಕಲಿ ವಹಿವಾಟುಗಳು ನಡೆಯುತ್ತಿವೆ ಎಂದು ವಿವಾದಾತ್ಮಕ ವೀಡಿಯೊಗಳನ್ನು ಹರಿಬಿಟ್ಟಿದ್ದರು ಎನ್ನಲಾಗಿದೆ. ಇದನ್ನು ಉದ್ದೇಶಪೂರ್ವಕ ಅಪಪ್ರಚಾರ ಎಂದು ಕರೆದ ನಾಗ್ಪುರ ಬಿಜೆಪಿ ದೂರು ದಾಖಲಿಸಿದೆ.
ಬಿಜೆಪಿ ನಾಗ್ಪುರ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಶಿಶಿರ್ ತ್ರಿಪಾಠಿ, ನಾಗ್ಪುರ ಸೈಬರ್ ಪೊಲೀಸರಿಗೆ ಔಪಚಾರಿಕ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ದೂರಿನಲ್ಲಿ ಅವರು ವೀಡಿಯೊಗಳ ವಿಶ್ವಾಸಾರ್ಹತೆ ಮತ್ತು ಗಡ್ಕರಿಯವರ ರಾಜಕೀಯ ಮತ್ತು ಸಾಮಾಜಿಕ ಖ್ಯಾತಿಗೆ ಹಾನಿ ಮಾಡುವ ಉದ್ದೇಶದಿಂದ ನಾಗರಿಕರೊಂದಿಗೆ ನಕಲಿ ಅಥವಾ ದಾರಿತಪ್ಪಿಸುವ ಸಂದರ್ಶನಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆಚ್ಚುವರಿಯಾಗಿ, ಅಂತಹ ದಾರಿತಪ್ಪಿಸುವ ಮಾಹಿತಿಯನ್ನು ಹರಡುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸಿದ್ದಾರೆ. ಮತ್ತು ತಮ್ಮ ಫಾಲೋವರ್ಸ್​ ಹೆಚ್ಚಿಸಿಕೊಳ್ಳುವ ಏಕೈಕ ಉದ್ದೇಶದಿಂದ ಕೇಂದ್ರ ಸಚಿವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net