ಗೇರಹಳ್ಳಿಯ ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ದೋಚಿದ್ದಲ್ಲದೇ, ದೇವಾಲಯಗಳಲ್ಲೂ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 20.50 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ವಾಹನ ವಶಪಡಿಸಿಕೊಳ್ಳಲಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪದ ಇಂದಿರಾನಗರ ನಿವಾಸಿ ಗಣೇಶ (37), ಕೇಕರೆ ಕೊಪ್ಪ ಬಡಾವಣೆಯ ಪ್ರದೀಪ (33) ಇಂದಿರಾನಗರದ ಸಂತೋಷ್ (35) ಬಂಧಿತರು.
ಆ.7ರಂದು ಬೆಳಗ್ಗೆ ಮಾಗಡಿ ಠಾಣಾ ವ್ಯಾಪ್ತಿಯ ಗೇರಹಳ್ಳಿಯ ಮನೆಗೆ ನುಗ್ಗಿದ ಆರೋಪಿಗಳು, ಮಹಿಳೆಯ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದರು. ಅಲ್ಲದೆ ಗೇರಹಳ್ಳಿ ದೇವಾಲಯ ಹಾಗೂ ಮಾಗಡಿ ಟೌನ್ ಬೈಚಾಪುರದ ಮನೆಯಲ್ಲಿಯೂ ಕಳವು ಮಾಡಿದ್ದರು.
ಮಾಗಡಿ, ಕುದೂರು, ಬಿಡದಿ, ತಾವರೆಕೆರೆ, ಅಕ್ಕೂರು, ಸಾತನೂರು, ಎಂ.ಕೆ.ದೊಡ್ಡಿ , ಕೋಡಿಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ಸಂಚರಿಸಿ, ದೇವಾಲಯ ಗುರುತಿಸಿ ಕಳವು ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ,
ಒಟ್ಟು 12 ಕಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
78 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ , 6 ಬೈಕ್, ಹಿತ್ತಾಳೆ ಕಳಸ, ದೇವತಾ ಮೂರ್ತಿ ಹಾಗೂ ಕಳವಿಗೆ ಬಳಸಿದ್ದ ಕಾರು, ಆಟೋ ಹಾಗೂ ವಾಕಿಟಾಕಿ ವಶಪಡಿಸಿಕೊಳ್ಳಲಾಗಿದೆ.
ಎಸ್‌ಪಿ ಶ್ರೀನಿವಾಸ್‌ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀರಾಮಚಂದ್ರಯ್ಯ, ರಾಜೇಂದ್ರ ಡಿ.ಎಸ್., ಡಿವೈಎಸ್ಪಿ ರವಿ ಕೆ.ವಿ.ಮಾರ್ಗದರ್ಶನದಲ್ಲಿ ಮಾಗಡಿ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ. ಶ್ರೀನಿವಾಸ್, ಸಬ್ ಇನ್‌ಸ್ಪೆಕ್ಟರ್ ಎನ್. ಮಂಜುನಾಥ್, ಸಬ್ ಇನ್‌ಸ್ಪೆಕ್ಟರ್ ಮನೋಜ್, ಸಿಬ್ಬಂದಿ ಬೀರಪ್ಪ, ಆಕ್ಬರ್, ಪ್ರಮೋದ, ಮುನೀಂದ್ರ, ಮಹೇಂದ್ರ ಪವಾರ್, ರಾಧಾಮಣಿ ಮಹದೇವ್ ಕಾರ್ಯಾಚರಣೆಯಲ್ಲಿದ್ದರು.