ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿ ಮಾಡಿರುವ ಒಳಮೀಸಲಾತಿಯನ್ನು ಸ್ವಾಗತ ಮಾಡಿರುವ ಮುಖಂಡರಿಗೆ ತವರು ಮನೆ ಮತ್ತು ಗಂಡನ ಮನೆ ವ್ಯತ್ಯಾಸ ಗೊತ್ತಿಲ್ಲದವರು. ಇನ್ನು ಕೆಲವರು ಕೋಳಿಗೆ ಕಾಳು ಹಾಕಿರುತ್ತಾರೆ. ಕಾಳು ತಿನ್ನುವ ಸಲುವಾಗಿ ಸ್ವಾಗತ ಮಾಡುತ್ತಾರೆ ಎಂದು ಸಂಸದ ಹಾಗೂ ಮಾದಿಗ ಸಮಾಜದ ಹಿರಿಯ ನಾಯಕ ಗೋವಿಂದ ಕಾರಜೋಳ ಚಾಟಿ ಬೀಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಳಮೀಸಲಾತಿ ವಿಚಾರದಲ್ಲಿ ಸಿದ್ಧರಾಮಯ್ಯ ಸರ್ಕಾರ ನಿರ್ಣಯ ತೆಗೆದುಕೊಂಡಿದ್ದು ಒಳಮೀಸಲಾತಿಯೇ ಅಲ್ಲ. ಒಳಮೀಸಲಾತಿ ಎಂದರೆ ಎಷ್ಟು ಹುದ್ದೆಗಳು ಖಾಲಿ ಇದ್ದರೂ ಆ ನಿಯಮ ಅನ್ವಯ ಆಗಬೇಕು. ಆದರೆ, ಈಗ ತೆಗೆದುಕೊಂಡಿರುವ ನಿರ್ಣಯ ೧೫ಕ್ಕಿಂತ ಕಡಿಮೆ ಹುದ್ದೆಗಳು ಇದ್ದರೆ ಅದಕ್ಕೆ ಒಳಮೀಸಲಾತಿ ಇಲ್ಲ ಎನ್ನು÷್ತತಾರೆ. ಹೀಗಾಗಿ ಇದು ಹೇಗೆ ಒಳಮೀಸಲಾತಿ ಎಂದು ಪ್ರಶ್ನಿಸಿದರು.
ಒಳಮೀಸಲಾತಿ ತಾರತಮ್ಯೆ ಆಗಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ನಿಮ್ಮೂರು ಮೈಸೂರ ಭಾಗದಿಂದಲೇ ಎಂದು ಆರೋಪಿಸಿದ ಕಾರಜೋಳ, ಅಲ್ಲಿ ೩೭ ಪ್ರೊಪೇಸರ್ ಹುದ್ದೆಗಳಲ್ಲಿ ೪೩ ಹುದ್ದೆಗಳು ಒಂದೇ ಸಮಾಜದವರು ಇದ್ದಾರೆ. ೩ ಮಾದಿಗರು ಇದ್ದರೆ ಒಬ್ಬರು ವಡ್ಡರ ಜನಾಂಗದವರು ಇದ್ದಾರೆ. ಇದು ಸಾಮಾಜಿಕ ನ್ಯಾಯನಾ ಹೇಳಿ ಸಿದ್ದರಾಮಯ್ಯನವರೇ ಎಂದು ಖಾರವಾಗಿ ಪ್ರಶ್ನಿಸಿದರು.
ವೈಜ್ಞಾನಿಕವಾಗಿದ್ದ ನ್ಯಾ. ನಾಗಮೋಹನ್‌ದಾಸ್ ವರದಿ, ಮಾಧುಸ್ವಾಮಿ ವರದಿ, ನ್ಯಾ.ಸದಾಶಿವಯ್ಯ ಅವರ ವರದಿ ಅವೈಜ್ಞಾನಿಕ ವರದಿ ಎಂದು ಘೋಷಣೆ ಮಾಡಿದ್ದರೆ ಅದನ್ನು ಜನರಿಗೆ ತಿಳಿಸಿ. ಕೇವಲ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ ಅವರ ಕಮೀಟಿ ಮಾಡಿ ವರದಿ ಪಡೆಯುವ ಅವಶ್ಯಕತೆ ಏನಿತ್ತು? ಅದು ಇದ್ದರೆ ಸಾವಿರಾರು ಕೋಟಿ ರೂ. ಖರ್ಚು ಮಾಡಿ ವಿವಿಧ ಕಮೀಟಿಗಳನ್ನು ರಚನೆ ಮಾಡಿದ್ದೇಕೆ ಎಂದು ಮತ್ತೆ ಮತ್ತೆ ಪ್ರಶ್ನೆ ಮಾಡಿದರು.
ಹಿಂದೆ ದೇವರಾಜ ಅರಸು ಅವರು ಎಲ್.ಜಿ.ಹಾವನೂರ ಕಮೀಷನ್ ನೇಮಿಸಿದ್ದರು. ಅವರು ಎಲ್ಲ ರೀತಿಯಿಂದಲೂ ವೈಜ್ಞಾನಿಕವಾಗಿ ರಾಜ್ಯದ ೨೯ ಸಾವಿರ ಹಳ್ಳಿಗಳು, ಗುಡ್ಡಗಾಡು ಪ್ರದೇಶ ಸರ್ವೆ ಮಾಡಿ, ಬೈಬಲ್ ರೀತಿಯಲ್ಲಿ ವರದಿ ನೀಡಿದ್ದರು. ಅದನ್ನಾದರೂ ಸಿದ್ಧರಾಮಯ್ಯ ಸರ್ಕಾರ ತೆಗೆದು ನೋಡಲಿ. ಯಾವ ಯಾವ ಜಾತಿಯವರು ಎಷ್ಟು ಜನ ಇದ್ದಾರೆ ಎಂದು ಗಮನಿಸಿ ಆ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಹೊಂದಿಸಿ ನೋಡಬಹುದಲ್ಲ ಎಂದರು.
ಸಿದ್ಧರಾಮಯ್ಯ ಅವರಿಗೆ ಹಿಂದುಳಿದ ವರ್ಗದಲ್ಲಿ ಒಳಮೀಸಲಾತಿ ಬೇಕು. ಅದೇ ಪರಿಶಿಷ್ಟ ಜಾತಿಯಲ್ಲಿ ಬೇಡ. ಇದ್ಯಾವ ಸಾಮಾಜಿಕ ನ್ಯಾಯ? ಇವರು ಅಹಿಂದ ನಾಯಕರಾ? ಹಿಂದುಳಿದ ವರ್ಗದಲ್ಲಿ ಪ್ರವರ್ಗ ೧, ಪ್ರವರ್ಗ ೨, ಪ್ರವರ್ಗ ೩ ಮಾಡಿ ಅದರಲ್ಲಿ ವಿವಿಧ ಜಾತಿಗಳನ್ನು ಸೇರಿಸಿದರು. ಅದು ಸಾಮಾಜಿಕ ನ್ಯಾಯ. ಅರಸು ಅವರ ಕಾಲದಿಂದಲೂ ಅದು ನಡೆದು ಬಂದಿದೆ. ನಿಮ್ಮ(ಸಿದ್ಧರಾಮಯ್ಯ) ಕಾಲದಲ್ಲಿ ಅನ್ಯಾಯ ಮಾಡುವುದೇ ಒಂದು ಪ್ರವೃತ್ತಿಯಾಗಿದೆ.
ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಈಗಾಗಲೇ ಅಲೆಮಾರಿಗಳು, ಕೊರಮ, ಕೊರಚ, ಮಾದಿಗ, ಲಂಬಾಣಿ, ಭೋವಿ ಜನಾಂಗದವರು ಬಂಡೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಎಲ್ಲ ವರ್ಗಗಳ ಜನರು ಬಂಡೇಳುತ್ತಾರೆ ಎಂದರು.