ಬೆಂಗಳೂರು: ಕೇಂದ್ರ ಸರ್ಕಾರ ಡೀಪ್‌ಟೆಕ್ ನಿಧಿಯಡಿ 22 ಕಂಪನಿಗಳಿಗೆ 2,192 ಕೋಟಿ ರೂ. ಸಾಲ ವಿತರಿಸಿರುವ ವರದಿಯಾಗಿದ್ದು, 15 ಫಲಾನುಭವಿ ಕಂಪನಿಗಳು ಆಯ್ಕೆ ಸಮಿತಿಯ ಸದಸ್ಯರೊಂದಿಗೆ ನಂಟು ಇರುವುದು ಎಷ್ಟು ಸರಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಈ ಕಂಪನಿಗಳ ಸಾಮರ್ಥ್ಯ ಅಥವಾ ಅರ್ಹತೆ ಬಗ್ಗೆ ಯಾವುದೇ ಪೂರ್ವಾಗ್ರಹ ಇಲ್ಲದೆ ಇದ್ದರೇ ಆಯ್ಕೆ ಪ್ರಕ್ರಿಯೆಯ ಮೇಲೆ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಅನಿವಾರ್ಯವಾಗಿ ಕೇಳಿಬರುತ್ತವೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಐಟಿ ಮತ್ತು ಬಿಟಿ ಸಚಿವನಾಗಿದ್ದ ಸಮಯದಲ್ಲಿ 2018ರಲ್ಲಿ ಎಲೆವೆಟ್ ಯೋಜನೆ ಆರಂಭಿಸಿ ಸರ್ಕಾರದ ಬೆಂಬಲದೊಂದಿಗೆ ಪ್ರತಿ ಸ್ಟಾರ್ಟ್‌ಅಪ್‌ಗೆ 50 ಲಕ್ಷ ರೂ. ವರೆಗೆ ಅನುದಾನ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.ಈ ವರ್ಷ ಅದೇ ಮಾದರಿಯನ್ನು ಇನ್ನಷ್ಟು ವಿಸ್ತರಿಸಿ, ದೇಶದಾದ್ಯಂತದ ಸ್ಟಾರ್ಟ್‌ಅಪ್‌ಗಳಿಗೆ ಮುಕ್ತವಾಗಿರುವ, ಡೀಪ್‌ಟೆಕ್ ಕ್ಷೇತ್ರಕ್ಕೆ ಮೀಸಲಾದ ಎಲೆವೆಟ್ ನೆಕ್ಸ್ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಇದರಡಿ 1 ಕೋಟಿ ರೂ. ವರೆಗೆ ಅನುದಾನ ನೀಡಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ಪ್ರತಿ ಹಂತದಲ್ಲಿ ಸಾವಿರಾರು ಅರ್ಜಿಗಳನ್ನು ಸ್ವತಂತ್ರ ಉದ್ಯಮ ಕ್ಷೇತ್ರದ ನಾಯಕರು ಮತ್ತು ಆಯಾ ಕ್ಷೇತ್ರದ ತಜ್ಞರು ಅರ್ಹತೆ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತಾರೆ. ಇದುವರೆಗೆ ಎಲೆವೆಟ್ ಮತ್ತು ಎಲೆವೆಟ್ ಎಕ್ಸ್ ಯೋಜನೆಗಳ ಮೂಲಕ 1,300ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಅನುದಾನ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಪಾತ ಅಥವಾ ತಾರತಮ್ಯದ ಆರೋಪಗಳಂತಹ ವಿವಾದಗಳು ಕಂಡುಬಂದಿಲ್ಲ.
ಸಾರ್ವಜನಿಕ ನವೋದ್ಯಮ ಕಾರ್ಯಕ್ರಮಗಳು ನವೋದ್ಯಮಕ್ಕೆ ಸ್ಫೂರ್ತಿ ನೀಡುವ ಮೊದಲು ಜನರಲ್ಲಿ ವಿಶ್ವಾಸ ಮೂಡಿಸಬೇಕು. ಸಂಸ್ಥಾಪಕರು ತಮ್ಮ ಆಲೋಚನೆ, ತಂತ್ರಜ್ಞಾನ ಮತ್ತು ಕಾರ್ಯಗತಗೊಳಿಸುವ ಸಾಮರ್ಥ್ಯದ ಬಲದ ಮೇಲೆ ಸ್ಪರ್ಧಿಸಬೇಕು. ಆಯ್ಕೆ ಪ್ರಕ್ರಿಯೆಯು ಪಾರದರ್ಶಕ, ನಿಷ್ಪಕ್ಷಪಾತ ಮತ್ತು ಸ್ವತಂತ್ರವಾಗಿದೆ ಎಂಬ ಸಂಪೂರ್ಣ ವಿಶ್ವಾಸ ಅವರಿಗೆ ಇರಬೇಕು. ಆ ವಿಶ್ವಾಸವೂ ಅನುದಾನದಷ್ಟೇ ಮಹತ್ವದ್ದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.