ಸಂಘಟಿತರಾಗದಿದ್ದರೆ ಉಳಿಗಾಲವಿಲ್ಲ

ಕಲಬುರಗಿ ಕನ್ನಡ ಭವನದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಮುದಾಯದ ಜನ ಸತ್ಕರಿಸಿದರು. ಅಲ್ಲಮಪ್ರಭು ಪಾಟೀಲ್​, ಜಗದೇವ ಗುತ್ತೇದಾರ್​, ಶಿವಶರಣಪ್ಪ ಕೋಬಾಳ್​, ಮಹಾಂತೇಶ ಕೌಲಗಿ, ಸುನೀಲ್​ ಮಾನ್ಪಡೆ, ಮಲ್ಲಿಕಾರ್ಜುನ ಹೆಳವಾರ, ಜೆ.ವಿನೋದಕುಮಾರ, ಹನುಮಯ್ಯ ಆಲೂರ್​ ಇತರರಿದ್ದರು.
ಕಲಬುರಗಿ ಕನ್ನಡ ಭವನದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಮುದಾಯದ ಜನ ಸತ್ಕರಿಸಿದರು. ಅಲ್ಲಮಪ್ರಭು ಪಾಟೀಲ್​, ಜಗದೇವ ಗುತ್ತೇದಾರ್​, ಶಿವಶರಣಪ್ಪ ಕೋಬಾಳ್​, ಮಹಾಂತೇಶ ಕೌಲಗಿ, ಸುನೀಲ್​ ಮಾನ್ಪಡೆ, ಮಲ್ಲಿಕಾರ್ಜುನ ಹೆಳವಾರ, ಜೆ.ವಿನೋದಕುಮಾರ, ಹನುಮಯ್ಯ ಆಲೂರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ
  • ಕಲಬುರಗಿಯಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಭೆ
ಕಲಬುರಗಿ: ಹಿಂದುಳಿದ ವರ್ಗಗಳ ಜನ ಸಂಘಟಿತರಾಗದಿದ್ದರೆ ಉಳಿಗಾಲವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಕನ್ನಡ ಭವನದಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಡಾ.ಯತೀಂದ್ರ, ಈ ಜನ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದಾರೆ. ಹಕ್ಕಿಗಾಗಿ ನಿರಂತರ ಹೋರಾಟವೂ ನಡೆದಿದೆ. ಆಗಾಗ ಕ್ರಾಂತಿ ಆದರೆ ಜಾತಿ ವ್ಯವಸ್ಥೆಗೆ ಕಡಿವಾಣ ಹಾಕಬಹುದು ಎಂದರು.
ಹಿಂದುಳಿದ ವರ್ಗಕ್ಕೆ ರಾಜಕೀಯ ಶಕ್ತಿ ದೊರೆತಿಲ್ಲ, ಸಿದ್ದರಾಮಯ್ಯನವರು ಎರಡನೇ ಅವಧಿಗೆ ಸಿಎಂ ಆದಾಗ ಐದು ವರ್ಷದ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೈಕಮಾಂಡ್​ ಮಾತಿಗೆ ಬೆಲೆಕೊಟ್ಟು ಚಕಾರವೆತ್ತದೆ ಅಧಿಕಾರ ಬಿಟ್ಟುಕೊಟ್ಟರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲೂ ಬಹುತೇಕ ಮುಂದುವರಿದ ಜನರು ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ, ಉದ್ಯಮ ಕ್ಷೇತ್ರದಲ್ಲೂ ಹಿಂದುಳಿದ ವರ್ಗದ ಜನಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಆಯಕಟ್ಟಿನ ಸ್ಥಳದಲ್ಲಿ ಕೆಲಸ ಮಾಡುವವರು, ಸಮಾಜ ನಿಯಂತ್ರಿಸುವವರು ಮುಂದುವರಿದ ಜನ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ರಾಜಕೀಯ ಪ್ರಜ್ಞೆ ಅಗತ್ಯ
ಹಿಂದುಳಿದ ವರ್ಗಗಳ ಜನರಲ್ಲಿ ಸಂಟನೆ ಕೊರತೆ ಇದೆ. ಈ ವರ್ಗದಲ್ಲೇ ಸಣ್ಣ ಸಣ್ಣ ಜಾತಿಗಳನ್ನು ಒಡೆದು ಮುಂದುವರಿದ ಜನ ಆಡಳಿತ ನಡೆಸುವಂತಾಗಿದೆ. ಈ ಜನರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಹಿಂದುತ್ವದ ಹೆಸರಿನಲ್ಲಿ ಕೋಮು ದಳ್ಳುರಿ ಎಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಇದರಲ್ಲೂ ಹಿಂದುಳಿದ ಜನ ಕೆಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದುತ್ವ ಒಳ್ಳೆಯದಲ್ಲ. ಶ್ರೇಣಿಕೃತ ವ್ಯವಸ್ಥೆ ಜಾರಿಗೆ ತರುವ ಹುನ್ನಾರ ನಡೆದಿದೆ. ಎಲ್ಲರೂ ಇದರಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.
ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಸ್ವಾತಂತ್ರ ಬಂದು ಏಳು ದಶಕ ಕಳೆದರೂ ಜಾತಿಗಣತಿ ಮಾಡಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಜಾತಿಗಣತಿ ಮಾಡಿಸಿ, ಅಧಿಕಾರ ಬಿಟ್ಟು ಹೋಗುವ ಮುನ್ನ ವರದಿ ಸ್ವೀಕರಿಸಿದ್ದಾರೆ. ಇದೀಗ ಜಾರಿಯಾಗುವುದು ಬಾಕಿ ಇದೆ ಎಂದು ಹೇಳಿದರು.
ಹೋರಾಟಕ್ಕೆ ಸಾತ್​
ಹಿಂದುಳಿದ ವರ್ಗದ ಜನ ಹೋರಾಟದ ಮನೋಭಾವ ಕಳೆದುಕೊಂಡಿದ್ದೇವೆ. ಸಂಟಿತರಾಗದಿದ್ದರೆ ಬೇರೆ ದಾರಿ ಇಲ್ಲ. ಉಳಿಗಾಲವೂ ಇಲ್ಲ. ಅನ್ಯಾಯ ಆದಾಗ ದನಿ ಎತ್ತಬೇಕು. ನಿಮ್ಮ ದನಿಗೆ ನಾನು ಸಾತ್​ ನೀಡುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಬಳಿಕ ನಾನು ನಿಮ್ಮೊಂದಿಗಿದ್ದೇನೆ ಎಂಬ ಸಂದೇಶ ರವಾನಿಸಿದರು.
ಒಕ್ಕೂಟದ ಅಡಿಯ ಸುಮಾರು 20 ಸಣ್ಣ ಸಣ್ಣ ಸಮುದಾಯದ ನಾಯಕರು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯನವರಿಗೆ ಮನವಿಪತ್ರ ಸಲ್ಲಿಸಿದರು. ಸಮುದಾಯದ ಎಲ್ಲರ ಮನವಿಯನ್ನೂ ಸ್ವೀಕರಿಸಿದ್ದು, ಹಂತ, ಹಂತವಾಗಿ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಯತೀಂದ್ರ ಭರವಸೆ ನೀಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್​, ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​, ಶಿವಶರಣಪ್ಪ ಕೋಬಾಳ್​, ಭೈಲಪ್ಪ ನೆಲೋಗಿ, ಮಲ್ಲಿಕಾರ್ಜುನ ಹೆಳವಾರ, ಜೆ.ವಿನೋದಕುಮಾರ, ಹನುಮಯ್ಯ ಆಲೂರ್​, ಹರೀಶ ಶಾಸಿ, ಶಂಕರ ಕಾಳನೂರ್​, ಸುನೀಲ್​ ಮಾನ್ಪಡೆ, ಬಸು ಇಂಗಳಗಿ ಸೇರಿ ವಿವಿಧ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು. ಹಿಂದುಳಿದ ವರ್ಗಗಳ ಅಡಿಯ ವಿವಿಧ ಸಮುದಾಯ ಮುಖಂಡರು ಸಚಿವರನ್ನು ಸತ್ಕರಿಸಿದರು. ಕುರುಬ ಸಮಾಜದ ಮುಖಂಡ, ನ್ಯಾಯವಾದಿ ಮಹಾಂತೇಶ ಕೌಲಗಿ ಸ್ವಾಗತಿಸಿ, ನಿರೂಪಿಸಿದರು.
"

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆದಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಹುನ್ನಾರ ನಡೆದಿದೆ. ಈ ಸಮುದಾಯದ ಯಾರೊಬ್ಬರೂ ತಮ್ಮ ಹಕ್ಕು ಕಳೆದುಕೊಳ್ಳಬಾರದು. ಬಿಜೆಪಿ ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ಈ ಕುತಂತ್ರ ನಡೆಸಿದೆ. ಎಚ್ಚೆತ್ತುಕೊಳ್ಳಬೇಕು. ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

— ಡಾ.ಯತೀಂದ್ರ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net